ಕೊಪ್ಪಳ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಕರಪತ್ರ ಹಂಚಲು ಮುಂದಾದ ಬಿಜೆಪಿ ನಾಯಕರ ಮೇಲೆ ಯುವಕರ ಗುಂಪು ಹಲ್ಲೆಗೆ ಯತ್ನಿಸಿದ ಘಟನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಯುವಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ರಾಯಚೂರಿಗೆ ತೆರಳುವ ಮಾರ್ಗ ಮಧ್ಯೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಸಂಸತ್ತಿನಲ್ಲಿ ನಿರ್ಣಯ ಅಂಗೀಕಾರವಾಗಿ ಅನುಷ್ಠಾನಕ್ಕೆ ಬಂದಿದೆ. ಈ ಬಗ್ಗೆ ಬಿಜೆಪಿ ಅಧಿಕೃತ ಕರಪತ್ರ ಹಂಚುವ ಕೆಲಸ ಮಾಡುತ್ತಿದೆ. ಇದಕ್ಕೆ ಯಾರೇ ವಿರೋಧ ವ್ಯಕ್ತಪಡಿಸುವ ಅಥವಾ ತಡೆಯಲು ಮುಂದಾದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೊಲೀಸರು ಯಾರನ್ನೂ ಓಲೈಸುವ ಅಗತ್ಯವಿಲ್ಲ ಎಂದು ಹೇಳಿದರು.
Advertisement
Advertisement
ಗಂಗಾವತಿ ನಗರದ ಕಿಲ್ಲಾ ಪ್ರದೇಶದ ಐದನೇ ವಾರ್ಡ್ ಈದ್ಗಾ ಕಾಲೋನಿ ಸಮೀಪದ ಸಮುದಾಯ ಭವನದ ಬಳಿ ಬಿಜೆಪಿ ಮುಖಂಡ ಪಾಂಡು ಅವರು ಸ್ಥಳಿಯರ ವಿರೋಧದ ನಡುವೆಯೂ ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದರು. ಈ ವೇಳೆ ಕೆಲ ಮುಸ್ಲಿಂ ಯುವಕರು ಬಿಜೆಪಿ ಮುಂಖಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
Advertisement
Advertisement
ಇದರಿಂದಾಗಿ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಕೆಲ ಬಿಜೆಪಿ ಮುಖಂಡರು ಸ್ಥಳಕ್ಕೆ ಆಗಮಿಸಿದರು. ಇದರಿಂದ ಕೆರಳಿದ ನೂರಾರು ಯುವಕರು ಬಿಜೆಪಿ ಮುಖಂಡರಿದ್ದ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ, ಬಿಜೆಪಿ ಮುಖಂಡರನ್ನು ಸುರಕ್ಷಿತವಾಗಿ ಸ್ಥಳದಿಂದ ಕಳುಹಿಸಿದ್ದರು.