Connect with us

Bengaluru City

ಗಿರೀಶ್ ಕಾರ್ನಾಡ್ ಬರೆದ ಪತ್ರ ಬಹಿರಂಗ ಪಡಿಸಿದ ಪ್ರಕಾಶ್ ರಾಜ್

Published

on

ಬೆಂಗಳೂರು: ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಇಂದು ವಿಧಿವಶರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಹುಭಾಷ ನಟ ಪ್ರಕಾಶ್ ರಾಜ್ ತಮಗೆ ಗಿರೀಶ್ ಕಾರ್ನಾಡ್ ಅವರು ಬರೆದ ಪತ್ರವನ್ನು ಬಹಿರಂಗಗೊಳಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಕಾಶ್ ರಾಜ್ ಅವರ 50ನೇ ಹುಟ್ಟುಹಬ್ಬಕ್ಕೆ ಗಿರೀಶ್ ಕಾರ್ನಾಡ್ ಅವರು ಪ್ರೀತಿಯಿಂದ ಪತ್ರ ಬರೆದು ಶುಭಕೋರಿದ್ದರು. ಆ ಪತ್ರದ ಪ್ರತಿಯನ್ನು ಇಂದು ನಟ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು ನೆನೆದು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ:ಗಿರೀಶ್ ಕಾರ್ನಾಡ್ ಒಬ್ಬ ಒಳ್ಳೆಯ ಮನುಷ್ಯರಾಗಿದ್ದರು – ಹ್ಯಾಟ್ರಿಕ್ ಹೀರೋ

ಕನ್ನಡವನ್ನು, ಕನ್ನಡಿಗರನ್ನು, ಕರ್ನಾಟಕವನ್ನು ಶ್ರೀಮಂತಗೊಳಿಸುತ್ತಾ ಬಾಳಿ ಬದುಕಿದ ಅದಮ್ಯ ಚೇತನ ಕಾರ್ನಾಡರಿಗೆ ನಮನ. ನೀವು ಸಮೃದ್ಧವಾದ, ಸೂರ್ತಿದಾಯಕ ಜೀವನವನ್ನು ನಡೆಸಿದ್ದಕ್ಕೆ ಗಿರೀಶ್ ಕಾರ್ನಾಡ್ ಜಿ ನಿಮಗೆ ಧನ್ಯವಾದಗಳು. ನಿಮ್ಮ ಜೊತೆ ನಾನು ಕಳೆದ ಪ್ರತಿ ಕ್ಷಣವೂ ಜೀವಂತಾವಾಗಿದೆ. ನಿಮ್ಮನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ, ಆದರೆ ನನ್ನ ಜೀವನದಲ್ಲಿ ನಿಮ್ಮ ಆದರ್ಶ ಸದಾ ಪಾಲಿಸುತ್ತೇನೆ ಎಂದು ಬರೆದು ಅವರು ಬರೆದ ಪತ್ರವನ್ನು ಹಾಕಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಒಂದೇ ವೇದಿಕೆಯಲ್ಲಿ ಗೌರವ ಡಾಕ್ಟರೇಟ್ ಪಡೆದಿದ್ವಿ: ಕಾರ್ನಾಡ್‍ರನ್ನ ನೆನೆದ ಪಾಪು

ಪತ್ರದಲ್ಲಿ ಏನಿದೆ?
ಪ್ರೀತಿಯ ಪ್ರಕಾಶ್ ರಾಜ್, ನಿಮಗೆ ಇಂದು ಐವತ್ತು ತುಂಬಿತೇ? ನಂಬಲಾಗುತ್ತಿಲ್ಲ. ಐವತ್ತು ತಲುಪುವುದು ಕಠಿಣ ಮಾತಲ್ಲ ನಿಜ, ಆರೋಗ್ಯವಾಗಿದ್ದರೆ ಯಾರಾದರೂ ಆ ಅಂಕಿಯನ್ನು ಮುಟ್ಟಬಹುದು. ಆದರೆ ನೀವು ಮಾತ್ರ ಈ ಐವತ್ತರಲ್ಲಿ ಎಷ್ಟೇಲ್ಲಾ ಯಶಸ್ಸನ್ನು, ಪ್ರತಿಭೆಯನ್ನು ತುಂಬಿದ್ದೀರಿ! ನೀವು ದಿನೇದಿನೇ ಬೆಳೆಯುತ್ತ ಭಾರತದುದ್ದಕ್ಕೂ ರೆಂಬೆ-ಕೊಂಬೆಗಳನ್ನು ಚಾಚುತ್ತಿರುವುದನ್ನ ನಿಮ್ಮ ಮಿತ್ರರಾದ ನಾವು ದೂರದಿಂದ ನೋಡಿ ನಲಿದಿದ್ದೇವೆ, ಹೆಮ್ಮೆಯಿಂದ ಬೀಗಿದ್ದೇವೆ.

ಹೀಗೆಯೇ ಮತ್ತು ಎತ್ತರ ಬೆಳೆಯುತ್ತಿರಿ, ಬೆಳಗುತ್ತಿರಿ. ಬೆಳಗುತ್ತಲೇ ನೂರನ್ನು ದಾಟಿ ಹೋಗಿರಿ. ನಿಮ್ಮ ಗಿರೀಶ್ ಕಾರ್ನಾಡ್ ಎಂದು ಪತ್ರ ಬರೆದು ಶುಭಕೋರಿದ್ದರು.

ಬಹು ಅಂಗಾಂಗ ವೈಫಲ್ಯದಿಂದ ಕಳೆದ 1 ತಿಂಗಳಿನಿಂದ ಬಳಲುತ್ತಿದ್ದ ಸಾಹಿತಿ ಬೆಂಗಳೂರಿನ ಲ್ಯಾವೆಲ್ಲಾ ರಸ್ತೆಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಅವರ ಅಂತ್ಯಸಂಸ್ಕಾರವನ್ನು ವಿದ್ಯುತ್ ಚಿತಾಗಾರದಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಇದನ್ನೂ ಓದಿ:ಕನ್ನಡಕ್ಕೆ ಅಂತರಾಷ್ಟ್ರೀಯ ಮನ್ನಣೆ ತಂದುಕೊಟ್ಟ ಕೆಲವೇ ಗಣ್ಯರಲ್ಲಿ ಕಾರ್ನಾಡ್ ಒಬ್ಬರು: ಚಂಪಾ

ಸಂಜೆ ಮೇಲೆ ಬೈಯಪ್ಪನಹಳ್ಳಿಯಲ್ಲಿರುವ ಕಲ್ಲಪಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ. ಸಚಿವರು, ಗಣ್ಯರು ಯಾರು ಬರುವುದು ಬೇಡ. ಸಾರ್ವಜನಿಕ ದರ್ಶನ ಇರುವುದಿಲ್ಲ. ಯಾವುದೇ ವಿಧಿ ವಿಧಾನ ಇರುವುದಿಲ್ಲ ಎಂದು ನಿರ್ದೇಶಕ ಕೆ.ಎಂ ಚೈತನ್ಯ ತಿಳಿಸಿದ್ದಾರೆ.

ಮಧ್ಯಾಹ್ನ ನಾವು ಅಂತ್ಯ ಸಂಸ್ಕಾರದ ಸಮಯದ ನಿಗದಿ ಮಾಡುತ್ತೇವೆ. ಅಪಾರ್ಟ್ ಮೆಂಟ್ ಬಳಿ, ಸಾರ್ವಜನಿಕರು ರಾಜಕಾರಣಿಗಳು ಬರುವುದು ಬೇಡ ಎಂದು ಪತ್ನಿ ಸರಸ್ವತಿ ಕಾರ್ನಾಡ್ ಮನವಿ ಮಾಡಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *