ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಅವರನ್ನು ಹೋದಲ್ಲಿ ಬಂದಲ್ಲಿ ವಿವಾದಗಳೇ ಬೆಂಬೀಳುತ್ತಿವೆ. ಕರ್ನಾಟಕದಲ್ಲಂತೂ ಸೈದ್ಧಾಂತಿಕ ಸಂಘರ್ಷದಿಂದ ಒಂದು ವಿಚಾರಧಾರೆಯವರ ವಿರೋಧ ಕಟ್ಟಿಕೊಂಡಿರೋ ಪ್ರಕಾಶ್ ರೈ ತೆಲುಗಿನಲ್ಲೀಗ ಹೊಸ ವಿವಾದವೊಂದರ ಕೇಂದ್ರ ಬಿಂದುವಾಗಿದ್ದಾರೆ. ಸಹ ನಟನೋರ್ವನಿಗೆ ಕಪಾಳಕ್ಕೆ ಹೊಡೆದಿದ್ದಾರೆಂಬ ಗುರುತರ ಆರೋಪವೊಂದು ಅವರ ಸುತ್ತ ಗಿರಕಿ ಹೊಡೆಯಲಾರಂಭಿಸಿದೆ.
ಪ್ರಕಾಶ್ ರೈ ಇದೀಗ ಹಲೋ ಗುರು ಪ್ರೇಮಂ ಕೋಸಮೆ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಯುವ ಕಾಮಿಡಿಯನ್ ಸಪ್ತಗಿರಿ ಕೂಡಾ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣಕ್ಕಾಗಿ ಸೆಟ್ ಒಂದನ್ನು ಹಾಕಲಾಗಿತ್ತು. ಅದರಲ್ಲಿಯೇ ಚಿತ್ರೀಕರಣವೂ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಏಕಾಏಕಿ ಸಿಟ್ಟಾದ ಪ್ರಕಾಶ್ ರೈ ಸಪ್ತಗಿರಿಯ ಕಪಾಳಕ್ಕೆ ಬಾರಿಸಿದ್ದಾರೆಂಬ ಸುದ್ದಿ ಎಲ್ಲೆಡೆ ಕೇಳಿ ಬರಲಾರಂಭಿಸಿತ್ತು.
ಈ ಬಗ್ಗೆ ಮಾಧ್ಯಮಗಳು ಪ್ರಕಾಶ್ ರೈ ಅವರನ್ನು ಸಂಪರ್ಕಿಸಿದಾಗ ಖಂಡಿತಾ ನಾನು ಯಾರಿಗೂ ಹೊಡೆದಿಲ್ಲ ಎಂಬಂಥಾ ಉತ್ತರ ಬಂದಿದೆ. ಆದರೆ ನಿರ್ದೇಶಕ ತ್ರಿನಧ ರಾವ್ ಮಾತ್ರ ಈ ಬಗ್ಗೆ ಪ್ರಕಾಶ್ ರೈ ಅವರಷ್ಟು ನಿಖರವಾದ ಉತ್ತರ ನೀಡಿಲ್ಲ. ಆ ಬಗ್ಗೆ ತಮಗೆ ಹೆಚ್ಚಿನ ಮಾಹಿತಿಯಿಲ್ಲ ಎಂಬಂಥಾ ಹಾರಿಕೆಯ ಉತ್ತರ ನೀಡಿದ್ದಾರೆ. ಇದುವೇ ಈ ಶೂಟಿಂಗ್ ಸ್ಪಾಟಲ್ಲಿ ಏನೋ ನಡೆದಿದೆ ಎಂಬ ಗುಮಾನಿ ಹುಟ್ಟಿಕೊಂಡು, ಪ್ರಕಾಶ್ ರೈ ಮೇಲೆ ಬಂದಿರೋ ಆರೋಪದಲ್ಲಿ ಸತ್ಯಾಂಶವಿದೆ ಎಂಬ ಸಂಶಯವೂ ಕಾಡುವಂತಾಗಿದೆ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv