Dakshina KannadaDistrictsKarnatakaLatestMain PostUdupi

ಪ್ರಕಾಶ್ ರೈಗೆ ಪ್ರಶಸ್ತಿ ನೀಡದಂತೆ ಹಿಂದೂ ಸಂಘಟನೆ ಪ್ರತಿಭಟನೆ- ರೈ ಪ್ರತಿಕ್ರಿಯಿಸಿದ್ದು ಹೀಗೆ

ಮಂಗಳೂರು, ಉಡುಪಿ: ಕಳೆದ 12 ವರ್ಷಗಳಿಂದ ವಿವಾದವೇ ಇಲ್ಲದೆ, ತಣ್ಣಗೆ ನಡೆಯುತ್ತಿದ್ದ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಈ ಬಾರಿ ಭಾರೀ ವಿವಾದಕ್ಕೆ ಕಾರಣವಾಗಿದೆ.

ಬಿಜೆಪಿಯ ಭಾರೀ ವಿರೋಧದ ನಡುವೆ ಡಾ. ಕೋಟ ಶಿವರಾಮ ಕಾರಂತರ ಹುಟ್ಟೂರ ಪ್ರಶಸ್ತಿ ಸ್ವೀಕರಿಸಲು ಬಹುಭಾಷಾ ನಟ ಪ್ರಕಾಶ್ ರೈ ಬಂದಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಡಿವೈಎಫ್‍ಐ ಕಾರ್ಯಕರ್ತರು ಸ್ವಾಗತಿಸಿದ್ರು.

ಇದೇ ವೇಳೆ ಮಾತನಾಡಿದ ಪ್ರಕಾಶ್ ರೈ, ಪ್ರತಿಭಟಿಸುವುದು ಅವರವರ ಹಕ್ಕು. ಪ್ರತಿಭಟಿಸಲಿ ಬೇಡ ಅನ್ನುವುದಿಲ್ಲ. ಕಾರಂತ ನನಗೆ ಅಜ್ಜ. ತುಂಬಾ ಆತ್ಮೀಯರಾಗಿದ್ದರು. ಅವರ ಹೆಸರಲ್ಲಿ ಪ್ರಶಸ್ತಿ ಸ್ವೀಕರಿಸುವುದು ಹೆಮ್ಮೆಯಿದೆ ಅಂತ ಹೇಳಿದರು. ಬಳಿಕ ಉಡುಪಿ ಮೂಲಕ ಕುಂದಾಪುರಕ್ಕೆ ತೆರಳಿದ್ರು. ಹಲವರ ಆಕ್ಷೇಪದ ನಡುವೆಯೂ ಇಂದು ಕುಂದಾಪುರದ ಕೋಟದಲ್ಲಿ ಪ್ರಕಾಶ ರೈಗೆ ಕಾರಂತ ಪ್ರಶಸ್ತಿ ಪ್ರದಾನ ನಡೆಯಲಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಹುಟ್ಟೂರ ಪ್ರಶಸ್ತಿಯನ್ನು ಪ್ರಕಾಶ್ ರೈಗೆ ನೀಡಬಾರದು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಎದ್ದ ಬೆನ್ನಲ್ಲೇ ಬಿಜೆಪಿಯೂ ಅಸಮಾಧಾನ ವ್ಯಕ್ತಪಡಿಸಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್, ಶಿವರಾಮ ಕಾರಂತ ಟ್ರಸ್ಟ್, ಶಿವರಾಮಕಾರಂತ ಹುಟ್ಟೂರ ಪ್ರತಿಷ್ಠಾನ ಜಂಟಿಯಾಗಿ ಕಳೆದ ಹದಿಮೂರು ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡುತ್ತಿದೆ. ಖ್ಯಾತ ನಟ ಪ್ರಕಾಶ್ ರೈಗೆ ಈ ಬಾರಿಯ ಸನ್ಮಾನವನ್ನು ಮಾಡಬೇಕು ಎಂದು ಪ್ರತಿಷ್ಠಾನ ಮೂರು ತಿಂಗಳ ಹಿಂದೆ ನಿರ್ಧಾರ ಮಾಡಿತ್ತು. ಆಯ್ಕೆ ಸಮಿತಿ, ಪಂಚಾಯತ್ ಮತ್ತು ಪ್ರತಿಷ್ಠಾನ ಹತ್ತು ದಿನಗಳ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತು.

ಇದನ್ನೂ ಓದಿ: `ಕಾರಂತ ಪ್ರಶಸ್ತಿ’ ಪ್ರಕಾಶ್ ರೈ ಸಾಧನೆಗೆ ನೀಡುತ್ತಿರುವುದು, ರಾಜಕೀಯ ಬೆರೆಸಬೇಡಿ- ಪ್ರಮೋದ್

ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ ಪ್ರಕಾಶ್ ರೈ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ರೈ ಗೆ ಪ್ರಶಸ್ತಿ ನೀಡಬಾರದು ಎಂಬ ದೊಡ್ಡ ಕೂಗು ಎದ್ದಿದೆ. ಪ್ರಕಾಶ್ ರೈ ಕಾವೇರಿ ನದಿ ವಿಚಾರದಲ್ಲಿ ಕರ್ನಾಟಕಕ್ಕೆ ವಿರುದ್ಧವೆಂಬಂತಹ ಹೇಳಿಕೆಗಳನ್ನ ನೀಡಿದ್ದರು. ಗೌರಿ ಲಂಕೇಶ್ ಹತ್ಯೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿದ್ದರು. ಡಿವೈಎಫ್‍ಐ ರಾಜ್ಯ ಸಮ್ಮೇಳನದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಒಳ್ಳೆ ನಟ ಅಂತ ಲೇವಡಿ ಮಾಡಿದ್ದರು. ಈ ಎಲ್ಲಾ ವಿಚಾರವನ್ನಿಟ್ಟು ಸಾಮಾಜಿಕ ಜಾಲತಾಣದಲ್ಲಿ ರೈಗೆ ಪ್ರಶಸ್ತಿ ನೀಡೋದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.

ಡಾ. ಶಿವರಾಮ ಕಾರಂತರ ಹೆಸರಿನಲ್ಲಿ ಕೊಡಲಾಗುವ ಪ್ರಶಸ್ತಿಯನ್ನು ಸ್ವೀಕರಿಸಲು ಪ್ರಕಾಶ್ ರೈ ಅವರಿಗೆ ನೈತಿಕತೆ ಇಲ್ಲ ಎಂಬ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿ ಶೇರ್ ಆಗ್ತಾ ಇದೆ. ಆದ್ರೆ ಪ್ರಶಸ್ತಿ ನೀಡುವ ಸಂಸ್ಥೆ ನಮ್ಮ ಸಮಿತಿಯಲ್ಲಿ ಯಾವುದೇ ಗೊಂದಲವಿಲ್ಲ. ನಟ ಪ್ರಕಾಶ್ ರೈ ಯವರೇ ಕಾರಂತರ ಹೆಸರಿನ ಗೌರವಕ್ಕೆ ಪಾತ್ರರಾಗಲಿದ್ದಾರೆ ಎಂದು ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಹಂದೆ ಹೇಳಿದ್ದಾರೆ.

ಸಂಜೆ ನಾಲ್ಕು ಗಂಟೆಗೆ ಕುಂದಾಪುರ ತಾಲೂಕಿನ ಕೋಟ ಕಾರಂತ ಥೀಂ ಪಾರ್ಕಿನಲ್ಲಿ ತಂಬೆಲರು ಎಂಬ 10 ದಿನದ ಕಾರ್ಯಕ್ರಮದ ಸಮಾರೋಪ ನಡೆಯಲಿದೆ. ಜೈ ಭಾರ್ಗವ ಸಂಘಟನೆ ಕಪ್ಪು ಬಾವುಟ ತೋರಿಸಿ ಪ್ರತಿಭಟಿಸುವ ಸೂಚನೆ ನೀಡಿದ್ದಾರೆ. ಯೋಗಿ ಆದಿತ್ಯನಾಥ್ ಪಂಥದ ಜೋಗಿ ಮಠದ ಭಕ್ತರು ಕಪ್ಪು ಅಂಗಿ ಧರಿಸಿ ಕಾರ್ಯಕ್ರಮದಲ್ಲೇ ಕುಳಿತು ವಿರೋಧ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಪ್ರತಿಭಟನೆ ಮಾಡೋದಾಗಿ ಬಿಜೆಪಿ ಕೂಡ ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *

Back to top button