ಕನ್ನಡ ಚಿತ್ರರಂಗಕ್ಕೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೊಸಬರ ತಂಡಗಳು ಬರುತ್ತಿವೆ. ಅದರಲ್ಲೂ ರಂಗಭೂಮಿಯಲ್ಲಿ ಕೆಲಸ ಮಾಡಿ ಅನುಭವ ಗಳಿಸಿರುವ ಒಂದಿಷ್ಟು ಯುವಕರು, ಕನ್ನಡ ಚಿತ್ರರಂಗಕ್ಕೆ ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಬರುತ್ತಿದ್ದಾರೆ. ಅಂತವರ ಸಾಲಿಗೆ ಈಗ ‘ಪ್ರಕರಣ ತನಿಖಾ ಹಂತದಲ್ಲಿದೆ’ (Prakarana Tanikha Hantadallide Film) ಚಿತ್ರ ಸೇರಿಕೊಳ್ಳಲಿದೆ.
‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರವನ್ನು ಕರದಾಯಾಮ ಸ್ಟುಡಿಯೋಸ್ ಸಂಸ್ಥೆಯಡಿ ಚಿಂತನ್ ಕಂಬಣ್ಣ ನಿರ್ಮಿಸಿದರೆ, ಸುಂದರ್ ಎಸ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇದೀಗ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್ ನೋಡಿರುವ ಫ್ಯಾನ್ಸ್‌ಗೆ ಸಿನಿಮಾದ ಬಗ್ಗೆ ಕುತೂಹಲ ಕೆರಳಿಸಿದೆ.
ಚಿತ್ರದ ಹೆಸರೇ ಹೇಳುವಂತೆ ಇದೊಂದು ಕ್ರೈಮ್ ಜಾನರ್ ಕುರಿತಾದ ಚಿತ್ರ. ತನಿಖೆಯೊಂದರ ಸುತ್ತ ಸುತ್ತುವಂತಹ ಚಿತ್ರ. ಡ್ರಗ್ಸ್ (Drugs) ಮಾಫಿಯಾ ಹಿನ್ನೆಲೆಯಲ್ಲಿ ಸಾಗುವ ಕಥೆ ಸಾಕಷ್ಟು ತಿರುವುಗಳನ್ನು ಪಡೆಯುತ್ತಾ ಹೋಗುತ್ತವೆ. ಮುಂದೆ ಏನೆಲ್ಲಾ ಆಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು.
ಒಂದಿಷ್ಟು ರಂಗಭೂಮಿ ಗೆಳೆಯರು ಸೇರಿ ಮಾಡಿದ ಚಿತ್ರವಿದು. ಬೇರೆ ಬೇರೆ ರಂಗತಂಡಗಳಲ್ಲಿ ಸಕ್ರಿಯರಾಗಿದ್ದ ಒಂದಿಷ್ಟು ಗೆಳೆಯರು ಒಟ್ಟಿಗೆ ಸೇರಿ ಈ ಚಿತ್ರವನ್ನು ಮಾಡಿದ್ದಾರೆ. ರಂಗಭೂಮಿಯಲ್ಲಿ ಅನುಭವಿಗಳಾದರೂ ಚಿತ್ರರಂಗಕ್ಕೆ ಎಲ್ಲರೂ ಹೊಸಬರೇ. ಮಹಿನ್ ಕುಬೇರ್, ಮುತ್ತುರಾಜ್ ಟಿ, ನಟ ಗಗನ್, ಚಿಂತನ್ ಕಂಬಣ್ಣ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬೆಂಗಳೂರು ಮತ್ತು ಕನಕಪುರದಲ್ಲಿ ಚಿತ್ರೀಕರಣವಾಗಿದೆ.
‘ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರಕ್ಕೆ ಮೋಹನ್ ಎಂ.ಎಸ್ ಮತ್ತು ಜಗದೀಶ್ ಆರ್ ಛಾಯಾಗ್ರಹಣ, ನಾನಿ ಕೃಷ್ಣ ಸಂಕಲನ ಮತ್ತು ಶಿವೋಂ ಸಂಗೀತವಿದೆ. ವಿ.ಎಫ್.ಎಕ್ಸ್ ಜವಾಬ್ದಾರಿಯನ್ನು ಲಕ್ಷ್ಮೀಪತಿ ಎಂ.ಕೆ ಹೊತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊನೆಯ ಹಂತದಲ್ಲಿದಲ್ಲಿದೆ.