ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna Pendrive Case) ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಎಸ್‍ಐಟಿ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಈಗಾಗಲೇ ಲುಕೌಟ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸಂಸದರು ವಿಮಾನ ನಿಲ್ದಾಣದಲ್ಲಿಯೇ ಅರೆಸ್ಟ್ ಆಗುತ್ತಾರಾ ಅನ್ನೋ ಪ್ರಶ್ನೆ ಎದ್ದಿದೆ.
ಹೌದು. ಪ್ರಜ್ವಲ್ ರೇವಣ್ಣ ಅವರ ರಿಟರ್ನ್ ಟಿಕೆಟ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಸದ್ಯ ಜರ್ಮನಿಯಲ್ಲಿರುವ ಪ್ರಜ್ವಲ್ ಮೇ 16ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಮೇ 15ರಂದು ಮ್ಯೂನಿಚ್ ಏರ್‍ಪೋರ್ಟ್‍ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಮೇ 16ರಂದು ಮಧ್ಯರಾತ್ರಿ ಬೆಂಗಳೂರು ಏರ್‍ಪೋರ್ಟ್‍ಗೆ ಆಗಮಿಸಲಿದ್ದು, ಟರ್ಮಿನಲ್ 2 ರಲ್ಲಿ ಬಂದಿಳಿಯಲಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿಯೇ ಪ್ರಜ್ವಲ್ ಬಂಧನವಾಗುವ ಸಾಧ್ಯತೆಗಳಿವೆ. ಇದನ್ನೂ ಓದಿ: ಸಂಸದ ಪ್ರಜ್ವಲ್ ರೇವಣ್ಣಗೆ ಲುಕೌಟ್ ನೋಟಿಸ್ ಜಾರಿ
ಇನ್ನೊಂದೆಡೆ ಎಸ್‍ಐಟಿ ಅಧಿಕಾರಿಗಳು ಜಗತ್ತಿನ ಎಲ್ಲಾ ಏರ್ ಪೋರ್ಟ್‍ಗಳಲ್ಲಿ ಪ್ರಜ್ವಲ್ ಮೇಲೆ ನಿಗಾ ಇಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಏರ್‌ಪೋರ್ಟ್‍ಗಳು, ಇಂಟರ್‍ಪೋಲ್‍ಗೂ ಲುಕ್‍ಔಟ್ ನೋಟಿಸ್ ರವಾನೆ ಮಾಡಿದ್ದಾರೆ. ಪ್ರಜ್ವಲ್ ಕಣ್ಣಿಗೆ ಬಿದ್ದ ತಕ್ಷಣವೇ ವಶಕ್ಕೆ ಪಡೆಯಲು ಸೂಚನೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಇದೀಗ ಜರ್ಮನಿಯಿಂದ ವಾಪಸ್ ಆಗುವ ಪ್ರಜ್ವಲ್ ರೇವಣ್ಣ ಬಂಧನದ ಭಾರೀ ಕುತೂಹಲ ಮೂಡಿಸಿದೆ.