ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ್ರ ನಿವಾಸದ ಮುಂದೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಆರ್.ಆರ್.ನಗರ ಕ್ಷೇತ್ರ ಉಳಿಸಲು ಪ್ರಜ್ವಲ್‍ಗೆ ಟಿಕೆಟ್ ಕೊಡಿ ಎಂದು ಒತ್ತಾಯ ಮಾಡಿದ್ದಾರೆ. ಈ ವಿಚಾರದಲ್ಲಿ ಸ್ವಲ್ಪ ಗೊಂದಲಗಳಿವೆ ಹಾಗಾಗಿ ಈ ವಿಷಯದ ಹೆಚ್ಚಿಗೆ ಮಾತನಾಡಲ್ಲ ಅಂತಾ ದೇವೇಗೌಡ್ರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
Advertisement
Advertisement
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಟಿಎ ಶರವಣ ಈ ವಿಷಯವನ್ನು ಬೀದಿಗೆ ತರಬೇಡಿ ಎಂದು ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದಾರೆ. ಈ ವಿಷಯವನ್ನು ಬೀದಿಗೆ ತರುವಂತೆ ಮಾಡಿದ್ದೇ ನೀವು, ಅಭ್ಯರ್ಥಿ ವಿಚಾರದಲ್ಲಿರುವ ಸಮಸ್ಯೆ ಬಗೆಹರಿಸಿ. ದೇವೇಗೌಡರು, ಕುಮಾರಸ್ವಾಮಿ ಅವರ ಮನವೊಲಿಸಿ ಎಂದು ಬೆಂಬಲಿಗರು ಆಗ್ರಹಿಸಿದ್ದಾರೆ.
Advertisement
ಮೊದಲ ಪಟ್ಟಿಯಲ್ಲಿ 35 ವರ್ಷದ ಒಳಗಿನ ವ್ಯಕ್ತಿಗೆ ಟಿಕೆಟ್ ನೀಡಿಲ್ಲ. ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಲೇಬೇಕು. ಆರ್ ಆರ್ ನಗರದಲ್ಲಿ ಏಪ್ರಿಲ್ 13ರಂದು ನಡೆಯಲಿರುವ ಸಮಾವೇಶದಲ್ಲಿ ಪ್ರಜ್ವಲ್ ಹೆಸರನ್ನು ಘೋಷಿಸುವಂತೆ ಮಾಡಲು ಶರವಣ ಅವರಿಗೆ ಬೆಂಬಲಿಗರು ಆಗ್ರಹಿಸಿದರು. ಕುಟುಂಬದೊಳಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಶರವಣ ತಿಳಿಸಿದ್ದಾರೆ.
Advertisement
ಆರ್ ಆರ್ ನಗರದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕು ಅನ್ನುವುದು ನಮ್ಮ ಆಗ್ರಹ. ಈಗಾಗಲೇ ದೇವೇಗೌಡರಿಗೆ ಮನವಿಯನ್ನು ಸಲ್ಲಿಸಿದ್ದೇವೆ. ಈ ಬಗ್ಗೆ ಕುಮಾರಸ್ವಾಮಿ ಅವರ ಜೊತೆ ಚರ್ಚಿಸುವುದಾಗಿ ಅಂತಾ ದೇವೇಗೌಡರು ಹೇಳಿದ್ದಾರೆ. ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಸೋಲಿಸಲು ಸಮರ್ಥ ಅಭ್ಯರ್ಥಿಯನ್ನು ಹಾಕಬೇಕಿದೆ. ಒಂದು ವೇಳೆ ಡಮ್ಮಿ ಅಭ್ಯರ್ಥಿಯ ಹೆಸರನ್ನು ಸೂಚಿಸಿದ್ದಲ್ಲಿ, ದೇವೇಗೌಡ ಅಪ್ಪಾಜಿಯ ಆಶೀರ್ವಾದ ಪಡೆದು ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಜೆಡಿಎಸ್ ಮುಖಂಡ ನಾರಾಯಣ ಸ್ವಾಮಿ ಹೇಳಿದ್ದಾರೆ.
ದೇವೇಗೌಡರ ಮನೆ ಎದುರು ಪ್ರತಿಭಟನೆ ನಡೆದಿದ್ದು, ಎಚ್‍ಡಿಡಿ ಅವರ ಕಾರನ್ನು ಪ್ರತಿಭಟನಾಕಾರರು ತಡೆದಿದ್ದಾರೆ. ಪ್ರತಿಭಟನಾಕಾರರನ್ನು ಬಲವಂತವಾಗಿ ಪೊಲೀಸರು ತೆರವುಗೊಳಿಸಿದ ನಂತರ ಮನೆಯಿಂದ ದೇವೇಗೌಡ್ರು ಜೆಪಿ ಭವನಕ್ಕೆ ತೆರಳಿದ್ದಾರೆ. ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಂಡು ಬಂದಿದ್ದು, ರಾಜ್ಯದ ಹಾಸನ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆಯಿಂದ 15 ಕ್ಕೂ ಹೆಚ್ಚು ಬಸ್‍ಗಳಲ್ಲಿ ಪ್ರಜ್ವಲ್ ಬೆಂಬಲಿಗರು ನಗರಕ್ಕೆ ಆಗಮಿಸಲಿದ್ದಾರೆ ಅಂತಾ ಹೇಳಲಾಗುತ್ತಿದೆ.