ನವದೆಹಲಿ: ಕೇಂದ್ರ ಹಣಕಾಸು ಬಜೆಟ್ ನಮ್ಮೆಲ್ಲರ ಹಾಗೂ ರಾಜ್ಯದ ಜನತೆಯ ನಿರೀಕ್ಷೆ ಹಾಗೂ ನಂಬಿಯನ್ನು ಹುಸಿ ಮಾಡಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದರು.
ಈ ಬಗ್ಗೆ ಮಾತನಾಡಿದ ಅವರು, ಬಜೆಟ್‍ನಲ್ಲಿ ಯಾವ ಸತ್ವವೂ ಇಲ್ಲ. ನಮ್ಮ ರಾಜ್ಯದ 25 ಸಂಸದರು ರಾಜ್ಯಕ್ಕೆ ಏನು ತಂದೆವು ಎಂದು ಹೇಳಬೇಕು ಎಂದು ಪ್ರಶ್ನಿಸಿದ ಅವರು, ಬಜೆಟ್‍ನಲ್ಲಿ ರಾಜ್ಯಕ್ಕೆ ಏನೂ ಇಲ್ಲ. ಜೊತೆಗೆ ದಕ್ಷಿಣ ಭಾರತಕ್ಕೆ ಯಾವ ಅನುಕೂಲವನ್ನು ಮಾಡಿಲ್ಲ. ಕೇಂದ್ರ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದರು.
ಬಜೆಟ್‍ನಲ್ಲಿ ಎಮ್ಸ್ ಬರುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಮೂಲಸೌಕರ್ಯಕ್ಕೆ ನೆರವು ಕೂಡ ಸಿಗಲಿಲ್ಲ. ಮೇಕೆದಾಟು ವಿಷಯಕ್ಕೆ ಸಂಬಂಧಿಸಿದಂತೆ ನಮಗೆ ನ್ಯಾಯವೂ ಸಿಕ್ಕಿಲ್ಲ. ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡುವ ಬಜೆಟ್: ಶಶಿಕಲಾ ಜೊಲ್ಲೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. 400 ಹೊಸ ತಲೆಮಾರಿನ ವಂದೆ ಭಾರತ್ ರೈಲು, 2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೆರಿಸುವ ಯೋಜನೆ, ಗ್ರಾಮೀಣ ಮಕ್ಕಳಿಗೆ ವನ್ ಕ್ಲಾಸ್ ವನ್ ಟಿವಿ, ಕೆನ್ ಬೆಟ್ಟಾ ನದಿ ಜೋಡಣೆ ಯೋಜನೆ, ಪಿಎಂ ಆವಾಸ್ ಯೋಜನೆಯಡಿ 80 ಲಕ್ಷ ಮನೆ ನಿರ್ಮಾಣ, ಜಿಎಸ್‍ಟಿ ಸಂಗ್ರಹ, 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಹೀಗೆ ಹಲವು ಯೋಜನೆಗಳನ್ನು ಕೇಂದ್ರ ಬಜೆಟ್ ಒಳಗೊಂಡಿತ್ತು. ಇದನ್ನೂ ಓದಿ: ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಇಲ್ಲ: ಶಶಿ ತರೂರ್