– ಪಕ್ಷದಿಂದಲೂ ಪ್ರಜ್ವಲ್ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ
ಶಿವಮೊಗ್ಗ: ಲೋಕಸಭಾ ಚುನಾವಣೆಯ ಬೆನ್ನಲ್ಲೇ ರಾಜ್ಯದಲ್ಲಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾದ ಪೆನ್‍ಡ್ರೈವ್ ಭಾರೀ ಸುದ್ದಿಯಲ್ಲಿದೆ. ಈ ಸಂಬಂಧ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯಿಸಿ, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ಪ್ರಕರಣದಲ್ಲಿ ಕುಟುಂಬದ ಹೆಸರು ಯಾಕೆ ತರ್ತಿರಾ ಎಂದು ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ಎಸ್ ಐಟಿ ರಚನೆ ಮಾಡಿದ್ದಾರೆ. ಈ ನೆಲದ ಕಾನೂನಿನಲ್ಲಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ಇಲ್ಲಿ ವ್ಯಕ್ತಿ ಬಗ್ಗೆ ಚರ್ಚೆ ಮಾಡಿ, ಕುಟುಂಬದ ಹೆಸರು ಏಕೆ ತರುತ್ತೀರಾ?, ದೇವೇಗೌಡರು, ಕುಮಾರಸ್ವಾಮಿ ಅಂತಾ ಹೆಸರು ಏಕೆ ತರುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹೆಚ್.ಡಿ.ರೇವಣ್ಣ ಎ1, ಪ್ರಜ್ವಲ್ ರೇವಣ್ಣ ಎ2 ಆರೋಪಿ – ಮನೆ ಕೆಲಸದಾಕೆಯಿಂದ ದೂರು
ತಪ್ಪುಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ನಾನು ಯಾರನ್ನು ವಹಿಸಿಕೊಳ್ಳುತ್ತಿಲ್ಲ. ಎಫ್‍ಐಆರ್ ಹಾಕಿದ್ದಾರೆ, ಎಸ್‍ಐಟಿ ರಚನೆ ಆಗಿದೆ ತನಿಖೆ ನಡೆದು ಸತ್ಯಾಂಶ ಹೊರಗೆ ಬರಲಿ. ನಮ್ಮ ಗಮನಕ್ಕೆ ಬಂದಿದ್ದರೆ ಮುಜುಗರ ತಪ್ಪಿಸಬಹುದಿತ್ತು. ಪ್ರತಿನಿತ್ಯ ಯಾರು ಎಲ್ಲಿ ಹೋಗ್ತಾರೆ ಬರುತ್ತಾರೆ ಅಂತಾ ಕಾಯಲು ಆಗುತ್ತಾ ಎಂದು ಹೆಚ್‍ಡಿಕೆ ಗರಂ ಆಗಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧ ಪಕ್ಷದಿಂದಲೂ ಕ್ರಮ ಕೈಗೊಳ್ಳುತ್ತೇನೆ. ಉಪ್ಪು ತಿಂದವರು ನೀರು ಕುಡಿಯಬೇಕು. ದೇವೇಗೌಡರು ಹಾಗೂ ನಾನು ಮಹಿಳೆಯರ ಬಗ್ಗೆ ಗೌರವಯುತವಾಗಿ ನಡೆದುಕೊಂಡಿದ್ದೇವೆ. ಮಹಿಳೆಯರ ಕಷ್ಟ-ಸುಖ ಕೇಳಿದ್ದೇನೆ ಎಂದು ಹೆಚ್‍ಡಿಕೆ ಹೇಳಿದ್ದಾರೆ.