ಬೆಂಗಳೂರು: ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನ ಕೊನೆಗೂ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧನದ ಬಳಿಕ ಪ್ರಜ್ವಲ್ ಅವರನ್ನ ಎಸ್‌ಐಟಿ ಕಚೇರಿಗೆ ಕರೆದೊಯ್ಯಲಾಗಿದ್ದು, ಇಂದು (ಶುಕ್ರವಾರ) ರಾತ್ರಿ ಎಸ್‌ಐಟಿ ಕಚೇರಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ಏಪ್ರಿಲ್ 27ರಂದು ಜರ್ಮನಿಗೆ ಹಾರಿದ್ದ ಪ್ರಜ್ವಲ್ ಮೇ 31ರ ತಡರಾತ್ರಿ ಜರ್ಮನಿಯ ಮ್ಯೂನಿಕ್‌ನಿಂದ ಬಂದ ಲುಫ್ತಾನ್ಸಾ ಏರ್‌ಲೈನ್ಸ್‌ನ DLH 764 A-359 ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದಿದ್ದಾರೆ.
ಅಷ್ಟಕ್ಕೂ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ಪೆನ್‌ಡ್ರೈವ್ ಪ್ರಕರಣ (Prajwal Pendrive Case) ಹುಟ್ಟಿಕೊಂಡದ್ದು ಹೇಗೆ? ಕಳೆದ ಏಪ್ರಿಲ್ 23 ರಿಂದ ಮೇ 31ರ ವರೆಗೆ ಏನೇನಾಯ್ತು? ಅನ್ನೋದರ ಕಂಪ್ಲೀಟ್ ಮಾಹಿತಿ ಇಲ್ಲಿದೆ… ಇದನ್ನೂ ಓದಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಧ್ಯರಾತ್ರಿ ಏರ್‌ಪೋರ್ಟ್‌ನಲ್ಲೇ ಅರೆಸ್ಟ್!
- ಏ.23: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಆರೋಪ ಪ್ರಕರಣ ಬೆಳಕಿಗೆ ಬಂದಿತು.
- ಏ.27: ದೇಶದ 2ನೇ ಹಂತ ಹಾಗೂ ರಾಜ್ಯದಲ್ಲಿ ಮೊದಲ ಹಂತದ ಲೋಕಚಣಾ ಚುನಾವಣೆ (Lok Sabha Elections) ಮುಗಿಯುತ್ತಿದ್ದಂತೆ ಪ್ರಜ್ಬಲ್ ವಿದೇಶಕ್ಕೆ ಎಸ್ಕೇಪ್ ಆಗಿದ್ದರು.
- ಏ.28: ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ಪೆನ್‌ಡ್ರೈವ್ ಪ್ರಕರಣವನ್ನು ತನಿಖೆ ನಡೆಸಲು ರಾಜ್ಯ ಸರ್ಕಾರ ಬೆಂಗಳೂರಿನ ಎಡಿಜಿಪಿ ಬಿಜಯಕುಮಾರ್ ಸಿಂಗ್, ಸಹಾಯಕ ಪೊಲೀಸ್ ಮಹಾ ನಿರೀಕ್ಷಕರಾದ ಸುಮನ್ ಡಿ. ಪನ್ನೇಕರ್ ಹಾಗೂ ಮೈಸೂರು ಎಸ್ಪಿ ಸೀಮಾ ಲಾಠ್ಕರ್ ಅವರನ್ನೊಳಗೊಂಡ ತನಿಖಾ ತಂಡವನ್ನು ರಚನೆ ಮಾಡಿತು.
- ಏ.29: ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಪ್ರಜ್ವಲ್ ರೇವಣ್ಣ ಅವರಿಗೆ ಎಸ್‌ಐಟಿ ಮೊದಲ ನೋಟಿಸ್ ಜಾರಿಗೊಳಿಸಿತು.
- ಮೇ 1: ಜರ್ಮನಿಗೆ ತೆರಳಿದ್ದ ಪೊಲೀಸ್ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಲು ತಮ್ಮ ವಕೀಲರ ಮೂಲಕ 7 ದಿನಗಳ ಕಾಲವಕಾಶ ಕೋರಿದ್ದರು.
- ಮೇ 2: ಅಶ್ಲೀಲ ವೀಡಿಯೋ ಪ್ರಕರಣದ ಆರೋಪಿಯಾಗಿದ್ದ ಪ್ರಜ್ವಲ್ ರೇವಣ್ಣ ಅವರನ್ನ ಬಂಧಿಸಲು ಎಸ್‌ಐಟಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿತು.
- ಮೇ 5: ಪ್ರಜ್ವಲ್ ರೇವಣ್ಣ ಅವರು ಜರ್ಮನಿಗೆ ತೆರಳಿದ್ದರಿಂದ ಎಸ್‌ಐಟಿ ಇಂಟರ್‌ಪೋಲ್ ಮೂಲಕ ಬ್ಲೂಕಾರ್ನರ್ ನೋಟಿಸ್ ಜಾರಿಗೊಳಿಸಿತು.
- ಮೇ 6: ಪ್ರಧಾನಿ ನರೇಂದ್ರ ಮೋದಿ ಅವರು ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರು.
- ಮೇ 18: ಸಂಸದ ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕೆ ವಾರಂಟ್ ಜಾರಿಗೊಳಿಸಲಾಯಿತು.
- ಮೇ 20: ಪ್ರಜ್ವಲ್ ಎಲ್ಲಿದ್ದರೂ ಬಂದು ಧೈರ್ಯವಾಗಿ ತನಿಖೆ ಎದುರಿಸುವಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮನವಿ. ಹಾಗೂ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡುವಂತೆ ವಿದೇಶಾಂಗ ಸಚಿವಾಲಯಕ್ಕೆ ಎಸ್‌ಐಟಿ ಪತ್ರ.
- ಮೇ 23: ಪ್ರಜ್ವಲ್ ಎಲ್ಲಿದ್ದರೂ ಬಂದು ಶರಣಾಗುವಂತೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವಾರ್ನಿಂಗ್.
- ಮೇ 24: ಪ್ರಜ್ವಲ್ ರೇವಣ್ಣಗೆ ಕೇಂದ್ರದಿಂದ ಶೋಕಾಸ್ ನೋಟಿಸ್.
- ಮೇ 27: ವಿದೇಶದಲ್ಲಿದ್ದುಕೊಂಡೇ ವೀಡಿಯೋ ಬಿಡುಗಡೆ ಮಾಡಿದ್ದ ಪ್ರಜ್ವಲ್ ರೇವಣ್ಣ, ಮೇ 31 ರಂದು ನಾನು ರಾಜ್ಯಕ್ಕೆ ಬರುತ್ತೇನೆ, ಎಸ್‌ಐಟಿ ಮುಂದೆ ಹಾಜರಾಗಿ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿಕೆ.
- ಮೇ 28: ಮ್ಯೂನಿಕ್‌ನಿಂದ ಬೆಂಗಳೂರಿಗೆ ಬರೋದಕ್ಕೆ ಲುಫ್ತಾನ್ಸಾ ಏರ್‌ಲೈನ್ಸ್ ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ.
- ಮೇ 29: ಹಾಸನ ನಗರದ ಆರ್.ಸಿ ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಸತತ 10 ಗಂಟೆಗಳ ಕಾಲ ಎಸ್‌ಐಟಿ ಹಾಗೂ ಎಫ್‌ಎಸ್‌ಎಲ್ ತಂಡ ಪರಿಶೀಲನೆ ನಡೆಸಿತ್ತು. ಪ್ರಜ್ವಲ್ ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆ ಹಾಗೂ ಇತರೆ ವಸ್ತುಗಳನ್ನು ಅಧಿಕಾರಿಗಳು ಕೊಂಡೊಯ್ದರು.
- ಮೇ 30: ಮ್ಯೂನಿಕ್‌ನಿಂದ ಹೊರಟ ಲುಫ್ತಾನ್ಸಾ ಏರ್‌ಲೈನ್ಸ್ನ ಡಿಎಲ್‌ಎಚ್ 764 ಎ-359 ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು.
- ಮೇ 31: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ರೇವಣ್ಣ ಆಗಮನ. ಇಮಿಗ್ರೇಷನ್ ಬಳಿಕ ಎಸ್‌ಐಟಿ ಅರೆಸ್ಟ್, ರಾತ್ರಿ ಎಸ್‌ಐಟಿ ಕಚೇರಿಯಲ್ಲೇ ವಾಸ್ತವ್ಯ.