– ರಾಜಕೀಯ ಲಾಭಕ್ಕಾಗಿ ಪೆನ್‌ಡ್ರೈವ್ ರಿಲೀಸ್ ಮಾಡಿದ್ದಾರೆ
– ವಿಲನ್ ಯಾರು ಅನ್ನೋದು ಕೊನೆಯಲ್ಲಿ ಗೊತ್ತಾಗುತ್ತೆ
ಬೆಂಗಳೂರು: ಬಹಳ ವರ್ಷಗಳಿಂದ ಒಕ್ಕಲಿಗ (Vokkaliga) ನಾಯಕತ್ವಕ್ಕಾಗಿ ಸಂಘರ್ಷ ನಡೆಯುತ್ತಿದೆ. ಒಕ್ಕಲಿಗ ನಾಯಕತ್ವ ವಹಿಸಿಕೊಳ್ಳಲು ಈ ಚಿಲ್ಲರೆ ಕೆಲಸ ಮಾಡಿದರೆ ಆಗುವುದಿಲ್ಲ ಎಂದು ಸಂಸದ ಡಿವಿ ಸದಾನಂದ ಗೌಡ (DV Sadananda gowda) ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ (Prajwal Revanna) ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪೆನ್‌ಡ್ರೈವ್, ಸಿಡಿ ಬಿಡುವಂಥ ನೀಚ ಕೆಲಸದಿಂದ ಯಾರೂ ಒಕ್ಕಲಿಗ ನಾಯಕರಾಗುವುದಿಲ್ಲ. ರಾಜಕೀಯ ಲಾಭಕ್ಕಾಗಿ ಎಷ್ಟೋ ಮನೆಗಳನ್ನು ಪೆನ್‌ಡ್ರೈವ್ ರಿಲೀಸ್ ಮಾಡಿ ಹಾಳು ಮಾಡಿದ್ದಾರೆ. ದೇವರು ಇದ್ದಾನೋ ಇಲ್ವೋ ಅನ್ನುವಷ್ಟರ ಮಟ್ಟಿಗೆ ಸಂತ್ರಸ್ತರ ವಿಚಾರದಲ್ಲಿ ಕೆಟ್ಟ ಬೆಳವಣಿಗೆ ಆಗಿದೆ. ಪ್ರಜ್ವಲ್ ಪರಾರಿಯಲ್ಲಿ ಅಡ್ಜಸ್ಟ್ಮೆಂಟ್ ಪಾಲಿಟಿಕ್ಸ್ ಇದೆ ಎಂದು ದೂರಿದರು.
Advertisement
ಸಾವಿರಾರು ಪೆನ್‌ಡ್ರೈವ್‌ಗಳಿವೆ. ಇಷ್ಟೆಲ್ಲ ಮಾಡಲು ಎಷ್ಟು ಸಮಯ, ಎಷ್ಟು ಹಣ ಬೇಕಾಗುತ್ತೆ? ಕಳೆದ ಆರು ತಿಂಗಳಿನಿಂದ ಈ ಪೆನ್‌ಡ್ರೈವ್ ಸಿದ್ಧತೆ ನಡೆಯುತ್ತಿರಬಹುದು. ಪ್ರಜ್ವಲ್ ಪ್ರಕರಣದಲ್ಲಿ ಸೂಕ್ತ ತನಿಖೆಯಾಗಿ ಸತ್ಯ ಹೊರಗೆ ಬರಬೇಕು. ಪ್ರಕರಣದಲ್ಲಿ ರಾಜಕೀಯ ಪ್ರವೇಶವಾಗಿದೆ ಎಂದರು.
Advertisement
Advertisement
ಯಾವುದೇ ಸಂದರ್ಭದಲ್ಲೂ ಇಷ್ಟು ದೊಡ್ಡ ಗಂಭೀರ ಆರೋಪ ಯಾರ ಮೇಲೂ ಬಂದಿರಲಿಲ್ಲ. ಆರೋಪ ಬಂದಾಗಲೇ ವಿದೇಶಕ್ಕೆ ಪ್ರಜ್ವಲ್ ಹೋಗಿದ್ದಾರೆ. ಮೇಲ್ನೋಟಕ್ಕೆ ಪ್ರಜ್ವಲ್ ಮೇಲೆ ಸಂಶಯವಿದೆ. ಹಾಗಂತ ದೇವೇಗೌಡರು, ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡಿ ಬಲಿಪಶು ಮಾಡುವ ಕೆಲಸ ಆಗುತ್ತಿದೆ. ಒಬ್ಬ ರಾಜಕಾರಣಿಯನ್ನು ಬಲಿಪಶು ಮಾಡುವ ಅತ್ಯಂತ ನೀಚ ಕೆಲಸ ಅಂದ್ರೆ ಸಿಡಿ, ಪೆನ್‌ಡ್ರೈವ್ ಬಿಡುವುದು. ಯಾರು ಪೆನ್‌ಡ್ರೈವ್ ರಿಲೀಸ್ ಮಾಡಿದ್ದಾರೋ ಅವರನ್ನ ಹಿಡಿದು ಶಿಕ್ಷೆ ಕೊಡಿಸುವ ಕೆಲಸ ಆಗಬೇಕು. ಸಿಡಿ, ಪೆನ್‌ಡ್ರೈವ್ ಡೈನಮೈಟ್ ಇದ್ದಂತೆ. ಪರದೆಯ ಹಿಂದೆ ಸಿಎಂ, ಡಿಸಿಎಂ ಇದ್ದಾರೆ. ರಿಮೋಟ್ ಕಂಟ್ರೋಲ್ ಮೂಲಕ ಎಲ್ಲವನ್ನೂ ಅವರು ನಿಯಂತ್ರಿಸುತ್ತಿದ್ದಾರೆ. ಒಂದು ಮಟ್ಟಿಗೆ ಪ್ರಜ್ವಲ್ ಪ್ರಕರಣ ಬಿಜೆಪಿಗೆ ಮುಜುಗರ ತಂದು ಡ್ಯಾಮೇಜ್ ಆಗಿತ್ತು. ಇವತ್ತು ಆ ಡ್ಯಾಮೇಜ್ ಬೌನ್ಸ್ ಬ್ಯಾಕ್ ಆಗಿದೆ ಎಂದು ಹೇಳಿದರು.
Advertisement
ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮತ್ತು ಡಿಕೆ ಶಿವಕುಮಾರ್ (DK Shivakumar) ಮಧ್ಯೆ ಮೊದಲಿಂದಲೂ ಸಂಘರ್ಷ ಇದೆ. ಇಬ್ಬರೂ ನಾವು ಜೋಡೆತ್ತುಗಳು ಎನ್ನುತ್ತಿದ್ದರು. ಜೋಡೆತ್ತುಗಳು ಪರಸ್ಪರ ಹಾಯುವುದನ್ನೂ ನೋಡಿದ್ದೇವೆ. ಇಬ್ಬರೂ ಕಥಾ ನಾಯಕ ಅಂದುಕೊಂಡಿದ್ದಾರೆ. ಆದರೆ ಕಥಾನಾಯಕನಷ್ಟೇ ಬಲಿಷ್ಟ ವಿಲನ್ ಇರುತ್ತಾನೆ. ಆದರೆ ವಿಲನ್ ಯಾರು ಅಂತ ಆರಂಭದಲ್ಲಿ ಗೊತ್ತಾಗುವುದಿಲ್ಲ. ಕೊನೆಗೆ ವಿಲನ್ ಯಾರು ಅನ್ನೋದು ಗೊತ್ತಾಗುತ್ತದೆ ಎಂದರು.
ಲೋಕಸಭೆ ಚುನಾವಣೆಯಲ್ಲಿ (Lok Sabha Election) ನಮ್ಮ ಪರ ವಾತಾವರಣ ಇದೆ. ಕಳೆದ ಹತ್ತು ವರ್ಷಗಳಿಂದ ನಿರಂತರ ಕೆಲಸ ಮಾಡಿದ್ದೇವೆ, ಕಾರ್ಯಕ್ರಮ ಮಾಡಿದ್ದೇವೆ. ಕಾಂಗ್ರೆಸ್‌ನವರಲ್ಲಿ ಫೋರ್ಸ್ ಇಲ್ಲ. ಕಾಂಗ್ರೆಸ್‌ನವರು ಹಗಲಲ್ಲಿ ಚುನಾವಣೆ ಮಾಡುವುದಿಲ್ಲ. ಅವರದ್ದು ಏನಿದ್ದರೂ ರಾತ್ರಿ ಚುನಾವಣೆ ಮಾತ್ರ. ಅವರು ರಾತ್ರಿ ಹೋಗಿ ಯಾರ್ಯಾರಿಗೆ ಪೆಟ್ಟಿಗೆ ಕೊಡಬೇಕೋ ಅಂತ ರಾತ್ರಿ ರಾಜಕಾರಣ ಮಾಡುತ್ತಾರೆ. ನಾವು ಸಾಧನೆಗಳ ಮೂಲಕ ನಿರಂತರವಾಗಿ ಜನರ ಕೆಲಸ ಮಾಡುತ್ತಾ ಬರುತ್ತಿದ್ದೇವೆ ಎಂದು ಹೇಳಿದರು.