ಹಾಸನ: ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡಿದ್ದ ಲೋಕೋಪಯೋಗಿ ಸಚಿವ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಮಾಲೀಕತ್ವದ ಕಟ್ಟಡಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಇಂದು ತೆರವುಗೊಳಿಸಲಾಯಿತು.
ನಗರದ ಬಿಎಂ ರಸ್ತೆಯಲ್ಲಿ ಸುಮಾರು 40 ಕಟ್ಟಡಗಳು ನಿರ್ಮಾಣ ಮಾಡಲಾಗಿತ್ತು. ಈ ಸಂಬಂಧ ನಗರಸಭೆ ಈ ಹಿಂದೆಯೇ ಎಲ್ಲಾ ಕಟ್ಟದ ಮಾಲೀಕರಿಗೂ ನೋಟಿಸ್ ಜಾರಿ ಮಾಡಿತ್ತು. 1ನೇ ವಾರ್ಡ್ ವ್ಯಾಪ್ತಿಯ ಬಿಎಂ ರಸ್ತೆಗೆ ಹೊಂದಿಕೊಂಡಂತೆ ಇರುವ ಆಸ್ತಿಯಲ್ಲಿ, 6 ಮೀಟರ್ ಕಟ್ಟಡ ರೇಖೆಯನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಿಸಲಾಗಿತ್ತು.
ನೋಟಿಸ್ ತಲುಪಿದ 7 ದಿನಗಳ ಒಳಗಾಗಿ ಅತಿಕ್ರಮಿಸಿದ ಜಾಗದ ತೆರವುಗೊಳಿಸಬೇಕು ಇಲ್ಲವೇ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ನಗರಸಭೆಗೆ ಹಾಜರು ಪಡಿಸಬೇಕು ಉಲ್ಲೇಖಿಸಲಾಗಿತ್ತು. ಹಾಸನ ನಗರ ಹೃದಯ ಭಾಗದಲ್ಲಿ ಈ ಕಟ್ಟಡಗಳು ನಿರ್ಮಾಣ ಮಾಡಲಾಗಿದ್ದು, ಇಲ್ಲಿನ ನಿವೇಶನಕ್ಕೆ ಹೆಚ್ಚಿನ ಬೆಲೆ ಇದೆ. ಆದ್ದರಿಂದ ನಗರ ಸಭೆ ನೋಟಿಸ್ ನೀಡಿದ ಬಳಿಕ ತೆರವು ಕಾರ್ಯಾಚರಣೆ ತಡೆ ನೀಡುವಂತೆ ತಡೆಯಾಜ್ಞೆ ತರುವ ಪ್ರಯತ್ನವೂ ನಡೆದಿತ್ತು.ಆದರೆ ಅಧಿಕಾರಿಗಳು ದಿಟ್ಟಕ್ರಮ ಕೈಗೊಳ್ಳುವ ಮೂಲಕ ಇಂದು ಬೆಳಗ್ಗೆಯೇ ಜೆಸಿಬಿ ಯಂತ್ರಗಳ ಮೂಲಕ ಸ್ಥಳಕ್ಕೆ ಆಗಮಿಸಿದ್ದರು. ಪೊಲೀಸ್ ಭದ್ರತೆಯ ನಡುವೆ 10 ಗಂಟೆಗಳ ವೇಳೆಗೆ ತೆರವು ಕಾರ್ಯಾಚರಣೆ ಆರಂಭವಾಗಿತ್ತು. ಸುಮಾರು 40 ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸುತ್ತಿರುವುದರಿಂದ ಶನಿವಾರವೂ ಕಾರ್ಯಾಚರಣೆ ಮುಂದುವರಿಯಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv