ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಮೂರನೇ ತಲೆಮಾರಿನ ಯಾರು ಚುನಾವಣೆ ಅಖಾಡಕ್ಕೆ ಇಳಿಯಲಿದ್ದಾರೆಂಬ ಚರ್ಚೆಗಳು ದಳ ಅಂಗಳದಲ್ಲಿ ಆರಂಭವಾಗಿವೆ. ಈಗಾಗಲೇ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಸಹ ಮಂಡ್ಯ ರಾಜಕಾರಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ವಿಧಾನಸಭಾ ಚುನಾವಣೆಯ ಬಳಿಕ ಪ್ರಜ್ವಲ್ ರೇವಣ್ಣ ಹಾಸನದಿಂದ ಮತ್ತು ನಿಖಿಲ್ ಕುಮಾರ್ ಮಂಡ್ಯದಿಂದಲೇ ಸ್ಪರ್ಧೆ ಮಾಡ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಮಾತುಗಳಿಗೆ ಪೂರಕ ಎಂಬಂತೆ ದೇವೇಗೌಡರು ಸಹ ಹಾಸನದಿಂದ ಪ್ರಜ್ವಲ್ ಸ್ಪರ್ಧೆ ಎಂದು ಘೋಷಣೆ ಮಾಡಿದ್ದರು. ಆದ್ರೆ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಮೈತ್ರಿ ಕಾಂಗ್ರೆಸ್ ಪಕ್ಷದ ನಾಯಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ತಾವೇ ಸ್ಪರ್ಧೆ ಮಾಡಬೇಕೆಂದು ತೀರ್ಮಾನಿಸಿದ್ದಾರಂತೆ. ಇತ್ತ ರೇವಣ್ಣ ಅವರ ಮತ್ತೋರ್ವ ಪುತ್ರ ಸೂರಜ್ ರೇವಣ್ಣರ ಹೆಸರು ಸಹ ಹರಿದಾಡುತ್ತಿದೆ.
Advertisement
Advertisement
ಮಂಡ್ಯ ಟಿಕೆಟ್ ಸಿಗುವ ಭರವಸೆ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಮಂಡ್ಯದ ಅಂಬರೀಶ್ ಅಭಿಮಾನಿಗಳು ಸುಮಲತಾ ಅವರೇ ಸ್ಪರ್ಧೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸುವ ಇಚ್ಛೆಯನ್ನು ಹೊರಹಾಕಿದ್ದಾರೆ. ಚುನಾವಣೆಯ ಸ್ಪರ್ಧೆಯ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಸುಮಲತಾ ಚರ್ಚಿಸಿದ್ದಾರೆ.
Advertisement
Advertisement
ಸುಮಲತಾರ ಸ್ಪರ್ಧೆ ಖಚಿತವಾಗುತ್ತಿದ್ದಂತೆಯೇ ದೊಡ್ಡಗೌಡರು ಮೊಮ್ಮಗನಿಗೆ ಈ ಬಾರಿ ಟಿಕೆಟ್ ನೀಡದಿರಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಹಾಸನದಲ್ಲಿ ಪ್ರಜ್ವಲ್ ರೇವಣ್ಣರ ಸ್ಪರ್ಧೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ರೆ, ತಾವೇ ಸ್ಪರ್ಧೆ ಮಾಡುವ ಕುರಿತು ದೊಡ್ಡಗೌಡರು ಲೆಕ್ಕ ಹಾಕಿದ್ದಾರಂತೆ. ಹಾಸನದಿಂದ ಟಿಕೆಟ್ ಸಿಗದೇ ಇದ್ದ ಪಕ್ಷದಲ್ಲಿ ಪ್ರಜ್ವಲ್ ರೇವಣ್ಣ ಮೈಸೂರು ಅಥವಾ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ. ಮಂಡ್ಯದಿಂದ ಟಿಕೆಟ್ ಸಿಗದೇ ಇದ್ರೆ ನಿಖಿಲ್ ಕುಮಾರಸ್ವಾಮಿ ಬೇರೆ ಕ್ಷೇತ್ರಗಳಿಂದ ಸ್ಪರ್ಧೆ ಮಾಡೋದು ಒಳಿತಲ್ಲ ಎಂದು ದೇವೇಗೌಡರು ಕುಟುಂಬಸ್ಥರಿಗೆ ಸಲಹೆ ನೀಡಿದ್ದಾರಂತೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv