ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ಆಸ್ಪತ್ರೆಗೆ ಬಂದಿದ್ದ ಇತರೆ ರೋಗಿಗಳು ಪರದಾಡುವಂತಾಯಿತು.
ಎಸ್‌ಐಟಿ (SIT) ಅಧಿಕಾರಿಗಳು ನಿನ್ನೆ ತಡರಾತ್ರಿ ಪ್ರಜ್ವಲ್ ರೇವಣ್ಣರನ್ನು ಬಂಧಿಸಿದರು. ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಅದಕ್ಕೂ ಮೊದಲು ವೈದ್ಯಕೀಯ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆ ತುರ್ತು ನಿಗಾ ಘಟಕದ ಕಟ್ಟಡದಲ್ಲಿ ಬಿಪಿ, ಶುಗರ್, ಪಲ್ಸ್, ಹಾರ್ಟ್ ರೇಟ್, ಯೂರಿನ್, ರಕ್ತ ಪರೀಕ್ಷೆ ನಡೆಸಲಾಯಿತು. ಇದನ್ನೂ ಓದಿ: ದೂರು ಕೊಡುವ ಸಂತ್ರಸ್ತೆಯರಿಗೆ ನಾವು ರಕ್ಷಣೆ ಕೊಡುತ್ತೇವೆ: ಪ್ರಜ್ವಲ್ ಬಂಧನ ಬಗ್ಗೆ ಗೃಹ ಸಚಿವರ ಪ್ರತಿಕ್ರಿಯೆ
ಪ್ರಜ್ವಲ್ ವೈದ್ಯಕೀಯ ಪರೀಕ್ಷೆ ವೇಳೆ, ಬೌರಿಂಗ್ ಆಸ್ಪತ್ರೆ ಬಳಿ ಪೊಲೀಸರ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಕೆಎಸ್‌ಆರ್‌ಪಿಯ ಒಂದು ತುಕಡಿ ನಿಯೋಜನೆ ಮಾಡಲಾಗಿತ್ತು. ತುರ್ತು ನಿಗಾ ಘಟಕದ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಇದರಿಂದಾಗಿ ಇತರೆ ರೋಗಿಗಳು ಪರದಾಡುವಂತಾಯಿತು.
ಎಮರ್ಜೆನ್ಸಿ ಅಂತಾ ಆಟೋದಲ್ಲಿ ಬಂದ ರೋಗಿಯನ್ನ ಗೇಟ್ ಬಳಿಯೇ ತಡೆದು ಸೆಕ್ಯೂರಿಟಿ ಗಾರ್ಡ್ಸ್ ದರ್ಪ ಮೆರೆದರು. ನಡೆದುಕೊಂಡು ಹೋಗಿ, ಇಲ್ಲಿಂದ ಮುಂದೆ ವಾಹನ ಬಿಡೋಲ್ಲ ಎಂದು ತಡೆದರು. ಹೊಟ್ಟೆ ನೋವು ಅಂತಾ ಪೀಣ್ಯದಿಂದ ಬಂದಿದ್ದ ರೋಗಿಯನ್ನು ತಡೆದರು. ಇದನ್ನೂ ಓದಿ: ವಿಶ್ರಾಂತಿಗೆ ತೆರಳಿದ ಹೆಚ್.ಡಿ.ಕುಮಾರಸ್ವಾಮಿ ಕುಟುಂಬ
ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ವೃದ್ಧರೊಬ್ಬರನ್ನು ತಡೆದು ಪೊಲೀಸರು ವಾಪಸ್ ಕಳಿಸಿದರು. ಪರೀಕ್ಷೆಗೆಂದು ಬ್ಯಾಂಡೇಜ್ ಸಮೇತ ರೋಗಿ ಆಸ್ಪತ್ರೆಗೆ ಬಂದಿದ್ದರು. ಈ ಬೆಳವಣಿಗೆ ಸಂಬಂಧ ‘ಪಬ್ಲಿಕ್ ಟಿವಿ’ ಸುದ್ದಿ ಬೆನ್ನಲ್ಲೇ ಆಸ್ಪತ್ರೆ ಸಿಬ್ಬಂದಿ ಎಚ್ಚೆತ್ತಿದ್ದಾರೆ. ಆಸ್ಪತ್ರೆ ಮುಖ್ಯ ಗೇಟ್ ತೆರೆದು ರೋಗಿಗಳಿಗೆ ಪರೀಕ್ಷೆಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದಾರೆ.
ರೋಗಿಗಳಿಗೆ ತೊಂದರೆ ಆಗದಂತೆ ಆಸ್ಪತ್ರೆಗೆ ಬಿಡುವಂತೆ ಪೊಲೀಸರು ಸೂಚಿಸಿದ್ದಾರೆ. ನಂತರ ಸೆಕ್ಯೂರಿಟಿಗಳು ಮುಚ್ಚಿದ್ದ ಗೇಟ್ ತೆರೆದು ಎಂದಿನಂತೆ ರೋಗಿ ಮತ್ತು ಕುಟುಂಬದವರಿಗೆ ಆಸ್ಪತ್ರೆಗೆ ಹೋಗಲು ಅವಕಾಶ ಮಾಡಿಕೊಟ್ಟರು. ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲಿ ಮಹಿಳಾ ಅಧಿಕಾರಿಗಳಿಂದ ಪ್ರಜ್ವಲ್ ಅರೆಸ್ಟ್ – ಯಾಕೆ?