ಬೆಂಗಳೂರು: ಅತ್ಯಾಚಾರ ಆರೋಪಿ ಹಾಸನದ ಬಿಜೆಪಿ-ಜೆಡಿಎಸ್ ಮೈತ್ರಿ ಪ್ರಜ್ವಲ್ ರೇವಣ್ಣ ಅವರಿಗೆ ಲೋಕಸಭಾ ಚುನಾವಣಾ ಫಲಿತಾಂಶ ನೋಡುವ ಭಾಗ್ಯ ಸಿಕ್ಕಿದೆ.
ರಿಸಲ್ಟ್ ನೋಡುವ ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ (Prajwal Revanna) ಅವರು ವಿಶೇಷ ತನಿಖಾ ತಂಡ (SIT) ಕಚೇರಿಯಲ್ಲಿ ಫಲಿತಾಂಶ ನೋಡುತ್ತಿದ್ದಾರೆ.
ಪೆನ್‌ಡ್ರೈವ್ ವಿಚಾರ ಹೊರಬರುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದರು. ಎಸ್‌ಐಟಿ ನೋಟಿಸ್ ಜಾರಿ ಮಾಡಿದ್ದರೂ ಕ್ಯಾರೇ ಎಂದಿರಲಿಲ್ಲ. ಬಳಿಕ ಬರೋಬ್ಬರಿ 34 ದಿನಗಳ ಬಳಿಕ ಭಾರತಕ್ಕೆ ವಾಪಸ್ಸಾಗಿದ್ದರು. ಜರ್ಮನಿಯ ಮ್ಯೂನಿಕ್‌ನಿಂದ ಪ್ರಜ್ವಲ್ ರೇವಣ್ಣ ಅವರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಎಸ್‌ಐಟಿ ಅಧಿಕಾರಿಗಳು ಲಾಕ್ ಮಾಡಿದ್ದರು.
ಇದಾದ ಬಳಿಕ ಮೆಡಿಕಲ್ ಟೆಸ್ಟ್ಗೆ ಒಳಪಡಿಸಿ ನಂತರ ಅವರನ್ನು ಎಸ್‌ಐಟಿಯವರು ಕೋರ್ಟ್‌ಗೆ ಹಾಜರುಪಡಿಸಿದ್ದರು. ಈ ವೇಳೆ ಪ್ರಜ್ವಲ್ ರೇವಣ್ಣ ಅವರು ಲೋಕಸಭಾ ಚುನಾವಣೆಯ ಫಲಿತಾಂಶ ನೋಡಲು ಅವಕಾಶ ನೀಡಬೇಕು ಎಂದು ಜಡ್ಜ್ ಮುಂದೆ ಮನವಿ ಮಾಡಿಕೊಂಡಿದ್ದರು. ಆಗ ಕೋರ್ಟ್, ಪರಿಸ್ಥಿತಿ ನೋಡಿಕೊಂಡು ವ್ಯವಸ್ಥೆ ಮಾಡಿಕೊಳ್ಳಲಾಗುವುದಾಗಿ ತಿಳಿಸಿತ್ತು. ಅಂತೆಯೇ ಇದೀಗ ಎಸ್‌ಐಟಿ ಕಚೇರಿಯಲ್ಲಿ ಪ್ರಜ್ವಲ್ ರೇವಣ್ಣ ಅವರು ಚುನಾವಣಾ ಫಲಿತಾಂಶ ವೀಕ್ಷಿಸುತ್ತಿದ್ದಾರೆ.