ಹಾಸನ: ದೇವೇಗೌಡರ ಕೊನೆಯ ಹೋರಾಟವನ್ನು ವಿಜಯೋತ್ಸವದಲ್ಲೇ ನಾಂದಿ ಹಾಡಬೇಕು ಎಂಬ ಆಸೆಯಿಂದ ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ನೂತನ ಸಂಸದರಾಗಿ ಆಯ್ಕೆಯಾಗಿರುವ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರಜ್ವಲ್ ಅವರು, ನಮ್ಮ ಜಿಲ್ಲೆ ಹಾಗೂ ಇಡೀ ರಾಜ್ಯದ ಜನತೆಗೆ ಎಷ್ಟು ನೋವಾಗಿದೆಯೋ ಅದರ ಎರಡರಷ್ಟು ನೋವು ನಮ್ಮ ಕಾರ್ಯಕರ್ತರಿಗೆ ಆಗಿದೆ. ನಾನು ದೇವೇಗೌಡರ ಸ್ಥಾನ ತುಂಬಿದ್ದೇನೆ ಹೊರತು ಅವರು ನನ್ನ ಸ್ಥಾನವನ್ನು ತುಂಬಿಲ್ಲ. ಇದು ನನ್ನ ತ್ಯಾಗ ಎಂದು ಭಾವಿಸಬೇಡಿ. ಇದು ನನ್ನ ಕರ್ತವ್ಯ ಎಂದು ಭಾವಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ನಾನು ರಾತ್ರಿಯೆಲ್ಲ ಬಹಳಷ್ಟು ಯೋಚನೆ ಮಾಡಿದ್ದೇನೆ. ನಾನು ರಾಜಕೀಯದಲ್ಲಿ ಯಾವತ್ತೂ ಕೂಡ ಯೋಚನೆ ಮಾಡದೆ ಏನೂ ಕೆಲಸ ಮಾಡಿಲ್ಲ. ಇಂದು ಯೋಚನೆ ಮಾಡಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಜಿಲ್ಲೆಯ ಜನತೆ ಮತ್ತು ಯಾರನ್ನು ಕೇಳಿಲ್ಲ. ಆದರೆ ಒಬ್ಬ ಜಿಲ್ಲೆಯ ಜನತೆಯಲ್ಲಿ ಎಲ್ಲರನ್ನೂ ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ನನ್ನ ನಿರ್ಧಾರ ತಪ್ಪಾಗಿದ್ದರೆ ಕ್ಷಮಿಸಬೇಕು ಎಂದು ಹಾಸನ ಜನತೆಯ ಬಳಿ ಕ್ಷಮೆ ಕೇಳಿದ್ದಾರೆ.
ಇಂದು ದೇವೇಗೌಡರ ಕೊನೆಯ ಹೋರಾಟವನ್ನು ವಿಜಯೋತ್ಸವದಲ್ಲೇ ನಾಂದಿ ಹಾಡಬೇಕು ಎಂಬ ಆಸೆಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ಈ ಬಗ್ಗೆ ನನ್ನ ಕುಟುಂಬದ ಜೊತೆ ಚರ್ಚೆ ಮಾಡಿಲ್ಲ. ಸುದ್ದಿಗೋಷ್ಠಿಗೆ ಬರುವ ಮೊದಲು ನನ್ನ ತಾಯಿಯ ಬಳಿ ಈ ಮಾತು ಹೇಳಿದೆ. ನನ್ನ ತಾಯಿ ನನ್ನ ನಿರ್ಧಾರವನ್ನು ಸಂತೋಷವಾಗಿ ಸ್ವೀಕರಿಸಿದ್ದಾರೆ. ಇಂದು ಎಲ್ಲರೂ ಎಚ್‍ಡಿಡಿಗೆ ಗೌರವ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರೆ ಎಲ್ಲರೂ ಒಪ್ಪುವಂತಹ ಕೆಲಸ ಇದು. ಹಾಗಾಗಿ ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು.
ಕಾಂಗ್ರೆಸ್ ವರಿಷ್ಠರು ದಿನೇಶ್ ಗುಂಡೂರಾವ್ ಹಾಗೂ ಎಂ.ಬಿ ಪಾಟೀಲ್ ಅವರು ದೇವೇಗೌಡರನ್ನು ಮಾತನಾಡಿಸಿ ಹೋಗಿದ್ದಾರೆ. ಗುರುವಾರ ರಾತ್ರಿ ಕುಮಾರಸ್ವಾಮಿ ಹಾಗೂ ರೇವಣ್ಣ ಅವರು ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ನಾನು ನನ್ನ ನಿರ್ಧಾರವನ್ನು ಅವರ ಬಳಿ ಇಟ್ಟಿದ್ದೇನೆ. ಅವರು ನನ್ನ ನಿರ್ಧಾರವನ್ನು ಸ್ವೀಕಾರ ಮಾಡಿದರೆ ಜಿಲ್ಲೆ ಜನತೆಗೆ ಗೌರವ ನೀಡಿದಂತೆ ಆಗುತ್ತದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ನನ್ನ ನಿರ್ಧಾರವನ್ನು ದೇವೇಗೌಡರು ಒಪ್ಪಿಕೊಂಡಿಲ್ಲ ಎಂದರೆ ನಾನು, ನಮ್ಮ ಕಾರ್ಯಕರ್ತರು, ಪಕ್ಷದ ಹಿರಿಯ ಮುಖಂಡರು, ಕಾಂಗ್ರೆಸ್ ಮತ್ತು ಜೆಡಿಎಸ್ ವರಿಷ್ಠರು ಎಲ್ಲರೂ ಸೇರಿ ಅವರ ಮನವೊಲಿಸಲು ಪ್ರಯತ್ನಿಸುತ್ತೇವೆ. ನಾನು ಸಂತೋಷದಿಂದ ದೇವೇಗೌಡರನ್ನು ಅವರ ಕ್ಷೇತ್ರಕ್ಕೆ ಕರೆದುಕೊಂಡು ಬಂದು ಅವರನ್ನು ಮತ್ತೆ ಗೆಲ್ಲಿಸಬೇಕು. 2005ರಲ್ಲಿ ಅವರು ಹೇಗೆ ಮೂರುವರೆ ಲಕ್ಷ ಮತದಿಂದ ಗೆದ್ದಿದ್ದರೋ ಅದೇ ವಿಜಯೋತ್ಸವವನ್ನು ನಾನು ಇಲ್ಲಿ ಕೊಡಬೇಕು ಎಂಬ ಆಸೆಯಿಂದ ನಾನು ರಾಜೀನಾಮೆ ಕೊಡುತ್ತಿದ್ದೇನೆ ಎಂದರು.
ನಾನು ಜನರಿಗೆ ಯಾವಗಲೂ ಚಿರಋಣಿ ಆಗಿರುತ್ತೇನೆ. ಅವರ ಪ್ರೀತಿ ವಿಶ್ವಾಸದಿಂದ ಹಗಲು ರಾತ್ರಿ ಕಷ್ಟಪಟ್ಟು ನನಗೆ ಗೆಲುವು ಕೊಟ್ಟಿದ್ದಾರೆ. ಇದು ನಾನು ಎಂದಿಗೂ ಮರೆಯುವುದಕ್ಕೆ ಆಗುವುದಿಲ್ಲ. ಒಬ್ಬ ವ್ಯಕ್ತಿಗೆ ಆತನ ಮೊದಲನೇ ಗೆಲುವು ಯಾವತ್ತಿಗೂ ಅದು ಎದೆಯಲ್ಲಿ ಉಳಿದು ಬಿಡುತ್ತದೆ. ಹಾಗಾಗಿ ಎಂದಿಗೂ ಅದು ನನ್ನ ಎದೆಯಲ್ಲಿ ಉಳಿದು ಬಿಡುತ್ತದೆ. ನಾನು ಜನರಿಗೆ ಗೌರವ ಕೊಡುತ್ತೇನೆ. ನನ್ನ ನಿರ್ಧಾರದಿಂದ ರಾಜ್ಯದ ರೈತರಿಗೆ ಅನೂಕಲ ಆಗುತ್ತೆ ಎಂಬ ಭಾವನೆಯಿಂದ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಪ್ರಜ್ವಲ್ ರೇವಣ್ಣ ತಿಳಿಸಿದರು.