ಪ್ರಜ್ವಲ್ ಪೆನ್‍ಡ್ರೈವ್ ಕೇಸ್- SIT ಮುಂದೆ ಸಂತ್ರಸ್ತೆಯರು ಕಣ್ಣೀರು

Public TV
1 Min Read
PENDRIVE PRAJWAL SIT

– ಹೆಸರು ಬಹಿರಂಗಗೊಂಡರೆ ಆತ್ಮಹತ್ಯೆಯ ಬೆದರಿಕೆ

ಹಾಸನ: ಪ್ರಜ್ವಲ್ ರೇವಣ್ಣಗೆ ಸೇರಿದೆ ಎನ್ನಲಾದ ಅಶ್ಲೀಲ ವೀಡಿಯೋಗಳಿರುವ ಪೆನ್ ಡ್ರೈವ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‍ಐಟಿಗೆ ಈಗ ಹೊಸ ತಲೆನೋವು ತರಿಸಿದೆ.

PRAJWAL REVANNA

ಏಪ್ರಿಲ್ 21ರಂದು ಸ್ಫೋಟಗೊಂಡ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾದ ವಿಡಿಯೋಗಳಲ್ಲಿ ಹಲವಾರು ಮಹಿಳೆಯರ ಅಶ್ಲೀಲ ವೀಡಿಯೋ ಎಲ್ಲೆಡೆ ಹರಿದಾಡುತ್ತಿವೆ. ಇದುವರೆಗೂ ಓರ್ವ ಸಂತ್ರಸ್ತೆ ಮಾತ್ರ ದೂರು ನೀಡಿದ್ದು, ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಅವರ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ. ಅವರ ಹೇಳಿಕೆ ವೀಡಿಯೋ ರೆಕಾರ್ಡ್ ಮಾಡಿಕೊಂಡಿರುವ ಎಸ್‍ಐಟಿ ಅಧಿಕಾರಿಗಳು ಯಾವ ಕ್ಷಣದಲ್ಲಾದರೂ ಸಂತ್ರಸ್ತೆಯ ಕರೆತಂದು ಸ್ಥಳ ಮಹಜರು ಮಾಡಲಿದ್ದಾರೆ. ಸಂತ್ರಸ್ತೆ ದೂರು ನೀಡಿರುವ ಪ್ರಕಾರ ಹೊಳೆನರಸೀಪುರದ ಎಚ್.ಡಿ.ರೇವಣ್ಣ ಅವರ ನಿವಾಸದಲ್ಲಿ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದು ಎಚ್.ಡಿ.ರೇವಣ್ಣ ನಿವಾಸದಲ್ಲಿ ಸ್ಪಾಟ್ ಇನ್ಸ್‍ಪೆಕ್ಷನ್ ನಡೆಸಲಿದ್ದಾರೆ.

ದೂರುದಾರೆ ಹೊರತುಪಡಿಸಿ ವೀಡಿಯೋದಲ್ಲಿ ಇರುವ ಸಂತ್ರಸ್ತ ಮಹಿಳೆಯರನ್ನು ಸಂಪರ್ಕಿಸಿರುವ ವಿಶೇಷ ತನಿಖಾ ತಂಡ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಅನೇಕ ಸಂತ್ರಸ್ತ ಮಹಿಳೆಯರು ಎಸ್‍ಐಟಿ ಅಧಿಕಾರಿಗಳ ಎದುರು ಕಣ್ಣೀರಿಟ್ಟಿದ್ದಾರೆ. ಇನ್ನೂ ಕೆಲವರು ನಮ್ಮ ಹೆಸರು ಬಹಿರಂಗಗೊಂಡರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದ್ದಾರೆ. ಇದು ವಿಶೇಷ ತನಿಖಾ ತಂಡಕ್ಕೆ ದೊಡ್ಡ ತಲೆ ನೋವಾಗಿದೆ. ಇದಲ್ಲದೇ ವೀಡಿಯೋದಲ್ಲಿರುವ ಹಲವು ಸಂತ್ರಸ್ತೆಯರು ತನಿಖೆಗೆ ಹೆದರಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಎಸ್‍ಐಟಿ ತಂಡ ಹಲವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಇದಲ್ಲೆವನ್ನೂ ಒಳಗೊಂಡು ತನಿಖೆಯನ್ನು ಚುರುಕುಗೊಳಿಸಲಾಗಿದೆ. ಆದರೆ ಇದುವರೆಗೂ ಓರ್ವ ಸಂತ್ರಸ್ತೆ ಮಾತ್ರ ದೂರು ನೀಡಿದ್ದಾರೆ.

PRAJWAL REVANNA 1

ಒಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿರುವ ಸಂಸದ ಪ್ರಜ್ವಲ್‍ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಸಂತ್ರಸ್ತ ಮಹಿಳೆಯರಿಗೆ ಸಂಕಷ್ಟ ತಂದೊಡ್ಡಿದ್ದರೆ ವಿಶೇಷ ತನಿಖಾ ತಂಡಕ್ಕೆ ಹಲವು ಸಮಸ್ಯೆ ಎದುರಾಗಿದ್ದು ತನಿಖೆ ಪೂರ್ಣಗೊಂಡ ನಂತರವೇ ಅಸಲಿಯತ್ತು ಬಯಲಾಗಬೇಕಿದೆ.

Share This Article