ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪೆನ್‍ಡ್ರೈವ್ ಕೇಸ್ ದಿನೇ ದಿನೇ ತಿರುವು ಪಡೆದುಕೊಳ್ತಿದೆ.
ಎಸ್‍ಐಟಿ ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಆದರೆ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್ ಮಾತ್ರ ಪತ್ತೆಯಾಗಿಲ್ಲ. ಷೆಂಗೆನ್ ವೀಸಾ ಹೊಂದಿರೋ ಪ್ರಜ್ವಲ್ ಯಾವ ದೇಶದ ಗಡಿಯನ್ನೂ ದಾಟಿಲ್ಲ.
ಬ್ಲೂ ಕಾರ್ನರ್ ನೋಟಿಸ್ (Blue Corner Notice) ಮಾಡಿರುವ ಇಂಟರ್ ಪೋಲ್ ಅಧಿಕಾರಿಗಳು ಪ್ರಜ್ವಲ್ ಯಾವ ದೇಶದಲ್ಲಿದ್ದಾರೆ ಅಂತ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಇದೆಲ್ಲಾ ಮಾಹಿತಿಯನ್ನು ತಿಳಿದುಕೊಂಡಿರುವ ಪ್ರಜ್ವಲ್ ಒಂದು ದೇಶದ ಗಡಿಯಿಂದ ಮತ್ತೊಂದು ದೇಶಕ್ಕೆ ಹೋಗುವ ಪ್ರಯತ್ನವನ್ನು ಮಾಡಿಲ್ಲ. ಇದರಿಂದ ತನಿಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದನ್ನೂ ಓದಿ: ಏನಿದು ಲುಕ್‌ಔಟ್ ನೋಟಿಸ್, ರೆಡ್ ಕಾರ್ನರ್, ಬ್ಲೂ ಕಾರ್ನರ್ ನೋಟಿಸ್? ಇವು ಹೇಗೆ ಕೆಲಸ ಮಾಡುತ್ತವೆ?
ಈಗಿರುವ ಮಾಹಿತಿ ಪ್ರಕಾರ, ಸದ್ಯಕ್ಕೆ ಪ್ರಜ್ವಲ್ ರೇವಣ್ಣ ಸ್ವದೇಶಕ್ಕೆ ವಾಪಸ್ಸಾಗುವ ಸಾಧ್ಯತೆಗಳು ಕ್ಷೀಣಿಸಿವೆ. ಲೋಕಸಭಾ ಚುನಾವಣೆ ಮುಗಿದ ನಂತರವೇ ಬರಬಹುದು ಎನ್ನಲಾಗಿದೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಹುಡುಕಿಕೊಟ್ಟವರಿಗೆ 1 ಲಕ್ಷ ಬಹುಮಾನ – ಪೋಸ್ಟರ್ ಅಂಟಿಸಿದ್ದವರು ಪೊಲೀಸರ ವಶಕ್ಕೆ
ಇತ್ತ ಆರೋಪಿ ಪ್ರಜ್ವಲ್ ಹುಡುಕಿಕೊಟ್ಟವರಿಗೆ ಬಂಪರ್ ಬಹುಮಾನ ಘೋಷಿಸಲಾಗಿದೆ. ಜನತಾ ಪಕ್ಷದಿಂದ ಸಂಸದ ಪ್ರಜ್ವಲ್ ರೇವಣ್ಣ ಹುಡುಕಿಕೊಟ್ಟವರಿಗೆ ಒಂದು ಲಕ್ಷ ಬಹುಮಾನ ಘೋಷಿಸಲಾಗಿದೆ. ಆರೋಪಿ ಪ್ರಜ್ವಲ್ ಹುಡುಕುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ. ಹಾಗಾಗಿ ಪ್ರಜ್ವಲ್ ರೇವಣ್ಣ ಹುಡುಕಿಕೊಟ್ಟವರಿಗೆ ಒಂದು ಲಕ್ಷ ಬಹುಮಾನ ಕೊಡೋದಾಗಿ ಪೋಸ್ಟರ್ ಅಂಟಿಸಿ ಜನತಾ ಪಕ್ಷದ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಪೋಸ್ಟರ್ ಅಂಟಿಸಿದ ಜನತಾ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಪೋಸ್ಟರ್ ತೆರವುಗೊಳಿಸಿದ ಪ್ರಸಂಗ ಇಂದು ನಡೆದಿದೆ.