ನವದೆಹಲಿ: ಮುಖ್ಯಮಂತ್ರಿ ಹುದ್ದೆ ಹೋಯ್ದಾಟದಲ್ಲಿ ಸಿದ್ದರಾಮಯ್ಯ (Siddaramaiah) ಏನೇನೋ ಬಡಬಡಿಸುತ್ತಿದ್ದಾರೆ. ಸರಿಯಾದ ದತ್ತಾಂಶ, ಅಧಿಕಾರಿಗಳಿಂದ ನೈಜ ಮಾಹಿತಿ ಪಡೆದು ಮಾತನಾಡಬೇಕೆಂಬ ಪರಿಜ್ಞಾನ ಸಿಎಂಗೆ ಇಲ್ಲದಿರುವುದು ರಾಜ್ಯದ ದುರಂತ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ತಿರುಗೇಟು ನೀಡಿದ್ದಾರೆ.
ಎಥೆನಾಲ್ ಹಂಚಿಕೆಯ ತಮ್ಮ ಮಾಹಿತಿಯೇ ಸುಳ್ಳು ಎಂದಿರುವ ಸಿಎಂ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವಲ್ಲಿ ಪರದಾಡುತ್ತಿರುವ ಸಿಎಂ ಹತಾಶೆಯಲ್ಲಿ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ. ಸತ್ಯಾಂಶ ಅರಿತೋ-ಅರಿಯದೆಯೋ ಬರೀ ಸುಳ್ಳೆಂಬ ಮರಳಿನ ಅರಮನೆ ಕಟ್ಟುತ್ತಿರುವವರು ಅವರೇ ಎಂದು ಚಾಟಿ ಬೀಸಿದ್ದಾರೆ.ಇದನ್ನೂ ಓದಿ: ಕಮಲ್ ಹಾಸನ್ ವಿರುದ್ಧ ಪ್ರತಿಭಟನೆ – ಬೆಂಗಳೂರಿನಲ್ಲಿ ಚಿತ್ರ ಬಿಡುಗಡೆಯಿಲ್ಲ
2024-25ರಲ್ಲಿ ಕರ್ನಾಟಕದಿಂದ ತೈಲ ಮಾರುಕಟ್ಟೆ ಕಂಪನಿ(OMC)ಗಳಿಗೆ ಒಟ್ಟು 139.8 ಕೋಟಿ ಲೀಟರ್ ಎಥೆನಾಲ್ ಅನ್ನು ಪೂರೈಸಿದೆ. ಮುಖ್ಯಮಂತ್ರಿ ಆದವರು ಮೊದಲು ದತ್ತಾಂಶ ಅರಿತು, ಅಧಿಕಾರಿಗಳಿಂದ ಸರಿಯಾದ ಮಾಹಿತಿ ಪಡೆದು ಅರ್ಥ ಮಾಡಿಕೊಂಡು ಮಾತನಾಡಬೇಕಿತ್ತು. ಆದರೆ ಸಿಎಂಗೆ ಈ ಕನಿಷ್ಠ ಪರಿಜ್ಞಾನವೂ ಇಲ್ಲದಾಗಿರುವುದು ದುರ್ದೈವ ಎಂದು ಟೀಕಿಸಿದ್ದಾರೆ
ಸಿಎಂ ಪಲಾಯನವಾದ:
ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿದ್ದಾಗ `ಬೆಲೆ ನಿಗದಿ ಮಾಡಿ, ಆವರ್ತ ನಿಧಿ ಸ್ಥಾಪನೆ ಮಾಡಿ’ ಎಂದೆಲ್ಲಾ ಸರ್ಕಾರಗಳಿಗೆ ಬಿಟ್ಟಿ ಸಲಹೆ ನೀಡುತ್ತಿದ್ದರು. ಇದೀಗ ತಾವೇ ಅಧಿಕಾರದಲ್ಲಿದ್ದರೂ ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವಲ್ಲಿ ವಿಫಲರಾಗಿದ್ದಾರೆ. ಕೇಂದ್ರ ಸರ್ಕಾರದತ್ತ ಬೆರಳು ತೋರುತ್ತ ಪಲಾಯನವಾದ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಉಲ್ಲೇಖಿಸಿರುವ ಸಂಸತ್ತಿನ ಉತ್ತರದಲ್ಲಿ 2025ರ ಜೂನ್ 20ರವರೆಗಿನ ದತ್ತಾಂಶ ಮಾತ್ರ ಇದೆ. ಆದರೆ, ಎಥೆನಾಲ್ ಸರಬರಾಜು ವರ್ಷವು ನವೆಂಬರ್‌ನಿಂದ ಪ್ರಾರಂಭವಾಗಿ ಅಕ್ಟೋಬರ್‌ನಲ್ಲಿ ಕೊನೆಗೊಳ್ಳುತ್ತದೆ. ಇದನ್ನು ಮರೆಮಾಚಿ ತಾವೇ ಸುಳ್ಳಿನ ಕಂತೆ ಕಟ್ಟಿದ್ದಾರೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಲವ್ ಕೇಸ್ ಚಿತ್ರದ ಮುಹೂರ್ತ : ಇದು ಮಲ್ಟಿಸ್ಟಾರ್ ಸಿನಿಮಾ
2004-2014ರ ಅವಧಿಯಲ್ಲಿ ಕಬ್ಬು ಬೆಳೆಗಾರರಿಗೆ ಸಕಾಲಕ್ಕೆ ಹಣ ಪಾವತಿ ಆಗುತ್ತಿರಲಿಲ್ಲ. ಇದರಿಂದಾಗಿ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ಅತಿ ಕಡಿಮೆ FRP/MSP ಇತ್ತು. 2005ರಲ್ಲಿಯೇ ಎಥೆನಾಲ್ ಮಿಶ್ರಣದ ಪ್ರಸ್ತಾಪ ಮಾಡಿದ್ದರೂ ಆ ಬಗ್ಗೆ ಕಿಂಚಿತ್ತೂ ಯೋಚನೆ ಸಹ ಮಾಡಿರಲಿಲ್ಲ. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2013-14ರಿಂದ 2024-25ರವರೆಗೆ ಇಂಧನ ದರ್ಜೆಯ ಎಥೆನಾಲ್ ಉತ್ಪಾದನೆ ಮತ್ತು ಔಒಅಗಳಿಗೆ ಪೂರೈಕೆ 26 ಪಟ್ಟು ಹೆಚ್ಚಾಗಿದೆ ಎಂದು ಪ್ರತ್ಯುತ್ತರ ಕೊಟ್ಟಿದ್ದಾರೆ.
2013-14ರಲ್ಲಿ ಕಬ್ಬು ಬೆಳೆ ಖರೀದಿ 57,104 ಕೋಟಿ ರೂ.ಗಳಷ್ಟಿತ್ತು, ಆದರೆ 2024-25ರಲ್ಲಿ 1,02,687 ಕೋಟಿ ರೂ. ಮೌಲ್ಯ ದಾಟಿದೆ. ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ಮೂಲಕ 2013-14ರಲ್ಲಿ 210 ರೂ. ಇತ್ತು. ಆದರೆ 2025-26ರ ಸಕ್ಕರೆ ಹಂಗಾಮಿನಲ್ಲಿ ಶೇ.10.25ರಷ್ಟು ಚೇತರಿಕೆಯೊಂದಿಗೆ 355 ರೂ./ಕ್ವಿಂಟಲ್‌ಗೆ ಏರಿಕೆಯಾಗಿದೆ. ಇದು ನಮ್ಮ ಸರ್ಕಾರದ ಬದ್ಧತೆ ಸಿದ್ದರಾಮಯ್ಯನವರೇ ಎಂದು ನಿಖರ ಅಂಕಿಅಂಶ ಸಹಿತ ತಿರುಗೇಟು ಕೊಟ್ಟಿದ್ದಾರೆ.
2013-14ರಿಂದ ಕಬ್ಬು ಆಧಾರಿತ ಡಿಸ್ಟಿಲರಿಗಳು ಮತ್ತು ಧಾನ್ಯ ಆಧಾರಿತ ಡಿಸ್ಟಿಲರಿಗಳು 2.18 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಆದಾಯಗಳಿಸಿದೆ. ಇದರಲ್ಲಿ ಕಬ್ಬು ಆಧಾರಿತ ಡಿಸ್ಟಿಲರಿಗಳು (26.10.2025ರಂತೆ) OMCಗಳಿಗೆ ಎಥೆನಾಲ್ ಮಾರಾಟದಿಂದ 1.29 ಲಕ್ಷ ಕೋಟಿ ರೂ.ಗಳಿಸಿವೆ. ಇದರಿಂದ ಸಕ್ಕರೆ ಕಾರ್ಖಾನೆಗಳು ರೈತರಿಗೆ ಸಕಾಲಿಕವಾಗಿ ಬಾಕಿ ಪಾವತಿಸಲು ನೆರವಾಗಿದೆ. ಅಲ್ಲದೇ ಕೇಂದ್ರ ಸರ್ಕಾರ ಸಕ್ಕರೆ ರಫ್ತನ್ನು ಸಕಾಲಿಕವಾಗಿ ಅನುಮತಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಥೆನಾಲ್ ಉತ್ಪಾದನೆ-ಪೂರೈಕೆ 26 ಪಟ್ಟು ಹೆಚ್ಚು:
ಹೆಚ್ಚುವರಿ ಸಕ್ಕರೆಯನ್ನು ಸಮತೋಲನಗೊಳಿಸಲು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ. 2013-14ರಿಂದ 2024-25ರವರೆಗೆ ಇಂಧನ ದರ್ಜೆಯ ಎಥೆನಾಲ್ ಉತ್ಪಾದನೆ ಮತ್ತು OMCಗಳಿಗೆ ಪೂರೈಕೆ 26 ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಬೆಲೆ ಸಮತೋಲನ ನಮ್ಮ ಬದ್ಧತೆ:
ಇಡೀ ದೇಶಕ್ಕೆ ಅನ್ವಯಿಸುವಂತೆ ಒಂದು ನೀತಿ ಜಾರಿ ಮಾಡುವುದು ಕೇಂದ್ರ ಸರ್ಕಾರದ ಕೆಲಸ. ಅಂತೆಯೇ ಸಕ್ಕರೆ ಬೆಲೆಯಲ್ಲಿ ಸಮತೋಲನ ಕಾಯ್ದುಕೊಳ್ಳುವುದೂ ನಮ್ಮ ಬದ್ಧತೆ. ಅದರಂತೆ ಕ್ರಮ ಕೈಗೊಳ್ಳುತ್ತದೆ. ಕಳೆದ 10 ವರ್ಷದ ಅವಧಿಯಲ್ಲಿ 10 LMT ಸಕ್ಕರೆ ರಫ್ತಿಗೆ ಅವಕಾಶ ನೀಡಲಾಗಿತ್ತು. ಈ ವರ್ಷ 15 LMTಗೆ ಅವಕಾಶ ನೀಡಲಾಗುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ದುರಾಡಳಿತದ ಪರಮಾವಧಿ-ರೈತರು ಬೀದಿಗೆ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕಬ್ಬು ಬೆಳೆಗಾರರ ಬೇಡಿಕೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ. ಕೇವಲ ಸುಳ್ಳು ಹೇಳಿಕೊಂಡು, ಸುಳ್ಳಿನ ಮನೆ ಕಟ್ಟಿ ಜನಸಾಮಾನ್ಯರನ್ನು, ರೈತರನ್ನು ಬೀದಿಗೆ ತಳ್ಳುವ ಕೆಲಸ ಮಾಡುತ್ತಿದೆ. ಗ್ಯಾರಂಟಿಗಳಷ್ಟೇ ನಿಮ್ಮ ಸರ್ಕಾರದ ಆಡಳಿತವಾಗಿದೆಯೇ ಹೊರೆತು ರಾಜ್ಯದ ಸಮಗ್ರ ಅಭಿವೃದ್ಧಿಯಲ್ಲ. ನಿಮ್ಮ ಕಾಂಗ್ರೆಸ್ ಸರ್ಕಾರದ ದುರಾಡಳಿತದ ಪರಮಾವಧಿಯಿಂದ ರೈತರು ಬೀದಿಗೆ ಬಂದಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.ಇದನ್ನೂ ಓದಿ: ನ.14 ರಿಂದ ಕಾಜು ಶತಮಾನೋತ್ಸವ ಸಮ್ಮೇಳನ

