ಬೆಂಗಳೂರು: ಪ್ರಧಾನಿ ಮೋದಿ ಅವರು ಅಸಾಧ್ಯವಾಗಿರುವುದನ್ನು ಸಾಧ್ಯ ಮಾಡುವವರು. ಇವರ ಕ್ಯಾಬಿನೆಟ್‍ಗೆ ನಾನು ಆಯ್ಕೆಯಾಗಿದ್ದೇನೆ. ಇದರಿಂದ ನಮ್ಮ ಮೇಲೆ ಇರುವ ಜವಬ್ದಾರಿ ಹೆಚ್ಚಿದೆ ಎಂದು ನೂತನ ಸಂಸದ ಪ್ರಹ್ಲಾದ್ ಜೋಶಿ ಹೇಳಿದರು.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನನಗೆ ಕರೆ ಮಾಡಿ ವಿಷಯ ತಿಳಿಸಿದರು. ಸಂಜೆ 5 ಗಂಟೆಗೆ ಪ್ರಧಾನ ಮಂತ್ರಿ ನಿವಾಸಕ್ಕೆ ಬರಬೇಕು. ಹಾಗೆಯೇ ಸಂಜೆ 7 ಗಂಟೆಗೆ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕಾರ ಮಾಡಬೇಕು ಎಂದರು. ಕೇಂದ್ರ ಸಚಿವ ಸ್ಥಾನ ಸಿಗುತ್ತಿರುವುದಕ್ಕೆ ಖುಷಿ ಆಗುತ್ತಿರುವುದಕ್ಕಿಂತ ಜವಬ್ದಾರಿ ಹೆಚ್ಚಿದೆ. ಮೋದಿ ಅವರ ಮೇಲೆ ಜನರ ನಿರೀಕ್ಷೆ ಬಹಳ ಇದೆ. ಕಳೆದ 5 ವರ್ಷ ಅವರು ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಮೋದಿ ಅವರು ಅಸಾಧ್ಯವಾಗಿರುವುದನ್ನು ಸಾಧ್ಯ ಮಾಡುವವರು. ಹೀಗಾಗಿ ನಮ್ಮ ಮೇಲು ಹೆಚ್ಚು ಜವಾಬ್ದಾರಿ ಇದೆ. ಬಂದ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಚೆನ್ನಾಗಿ ಕೆಲಸ ಮಾಡುತ್ತೇವೆ ಎಂದು ಖುಷಿಯನ್ನು ವ್ಯಕ್ತಪಡಿಸಿದರು.
ನಮ್ಮ ಪಕ್ಷದ ಮೇಲೆ ನನಗೆ ಭರವಸೆ ಇದೆ. ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಿಂದ ಹಿಡಿದು ಇಂದಿನ ನಾಯಕರಾದ ಮೋದಿ ಹಾಗೂ ಅಮಿತ್ ಶಾ ಅವರು ಸೂಕ್ತ ನಿರ್ಧಾರವನ್ನೇ ತೆಗೆದುಕೊಂಡು ಬಂದಿದ್ದಾರೆ. ಮುಂದೆಯೂ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಹಿಂದಿನ ಕ್ಯಾಬಿನೆಟ್‍ನಲ್ಲಿ ನನಗೆ ಸ್ಥಾನ ಕೊಡದ ಬಗ್ಗೆ ನಾನು ಮಾತನಾಡುವುದಿಲ್ಲ ಹಿಂದೆ ಕೂಡ ನಮ್ಮ ನಾಯಕರು ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದರು. ಈಗಲೂ ಸರಿಯಾಗಿಯೇ ತಿರ್ಮಾನಿಸಿದ್ದಾರೆ. ಉತ್ತರ ಕರ್ನಾಟಕದಿಂದ ನಾನು ಮತ್ತು ಸುರೇಶ್ ಅಂಗಡಿ ಇಬ್ಬರು ಇದ್ದೇವೆ ಹಾಗೆಯೇ ದಕ್ಷಿಣದಿಂದ ಸದಾನಂದ ಗೌಡರು ಇದ್ದಾರೆ. ನಾವೆಲ್ಲರೂ ಸೇರಿ ಸಮಗ್ರ ಕರ್ನಾಟದ ಅಭಿಮೃದ್ಧಿ ಪರವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಪ್ರಥಮ ಬಾರಿಗೆ ಕೇಂದ್ರ ಸಚಿವನಾಗುತ್ತಿದ್ದೇನೆ ಇಂತಹದ್ದೆ ಖಾತೆ ಬೇಕು ಅಂತ ನಿರೀಕ್ಷೆ ಮಾಡಿಲ್ಲ. ಮೋದಿ ಹಾಗೂ ನಮ್ಮ ನಾಯಕರು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾನು ಬದ್ಧ ಎಂದರು. ಬಳಿಕ ಅನಂತ್‍ಕುಮಾರ್ ಹೆಗಡೆ ಅವರಿಗೆ ಕೊಕ್ ಕೊಟ್ಟಿರುವ ವಿಚಾರವಾಗಿ ಮಾತನಾಡಿ, ನಮ್ಮ ನಾಯಕರು ಯಾವ ಕಾಲಕ್ಕೆ ಏನು ಮಾಡಬೇಕು ಎಂದು ಮೊದಲೇ ಯೊಚನೆ ಮಾಡಿರುತ್ತಾರೆ. ಹಿಂದೆ ಅವರಿಗೆ ಸ್ಥಾನ ಕೊಟ್ಟಿದ್ದರು. ಈ ಬಾರಿ ನನಗೆ ಸ್ಥಾನ ಕೊಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಮಹದಾಯಿ ವಿಚಾರವಾಗಿ ಮಾತನಾಡಿ, ಈ ವಿಷಯ ಕೋರ್ಟ್‍ನಲ್ಲಿದೆ. ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಈ ಬಗ್ಗೆ ವರದಿ ವರದಿ ಸಲ್ಲಿಸಿದೆ. ಕೋರ್ಟ್‍ನಲ್ಲಿ ಈ ವಿಚಾರ ಪೆಂಡಿಂಗ್ ಅಲ್ಲಿ ಇದೆ. ಹೀಗಾಗಿ ಕೋರ್ಟ್ ಮಹದಾಯಿ ವಿಚಾರದಲ್ಲಿ ತೀರ್ಪು ಕೊಟ್ಟ ನಂತರ ನಾವು ಸೂಕ್ತ ಕ್ರಮ ತೆಗೆದುಕೊಂಡು ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.