ವಿವಾದಾತ್ಮಕ ಹೇಳಿಕೆಯಿಂದಲೇ ಸದ್ದು ಮಾಡ್ತಿದ್ದ ಮೂವರು ಸಂಸದರಿಗೆ ಬಿಜೆಪಿ ಟಿಕೆಟ್‌ ನಿರಾಕರಣೆ

Public TV
3 Min Read
Pragya Thakur Parvesh Sahib Singh Verma Ramesh Bidhuri

ನವದೆಹಲಿ: ಲೋಕಸಭಾ ಚುನಾವಣೆಗೆ (General Elections 2024) ಬಿಜೆಪಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದು, ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ವಿವಾದಾತ್ಮಕ ಹೇಳಿಕೆಗಳಿಂದಲೇ ಸದ್ದು ಮಾಡುತ್ತಿದ್ದ ಮೂವರು ಸಂಸದರನ್ನು ಬಿಜೆಪಿ ಕೈಬಿಟ್ಟಿದೆ.

ಸಂಸದರಾದ ಫೈರ್‌ಬ್ರ್ಯಾಂಡ್‌ ನಾಯಕಿ ಪ್ರಜ್ಞಾ ಠಾಕೂರ್ (Pragya Thakur), ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ, ರಮೇಶ್ ಬಿಧುರಿ ಅವರು ಬಿಜೆಪಿ ಮೊದಲ ಪಟ್ಟಿಯಿಂದ ಔಟ್‌ ಆಗಿದ್ದಾರೆ. ಸಂಸತ್ತಿನ ಒಳಗೆ ಮತ್ತು ಹೊರಗೆ ತಮ್ಮ ವಿವಾದಾತ್ಮಕ ಹೇಳಿಕೆಗಳಿಗಾಗಿ ಮೂವರು ನಾಯಕರು ಬಿಜೆಪಿಗೆ ಬೇಡವಾಗಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಚುನಾವಣೆ ಹೊತ್ತಿನಲ್ಲಿ ಯಾವ ವಿರೋಧವನ್ನೂ ಎದುರಿಸಲು ಸಿದ್ಧವಿಲ್ಲ ಎಂಬ ಸಂದೇಶವನ್ನು ಬಿಜೆಪಿ ರವಾನಿಸಿದಂತಿದೆ. ಇದನ್ನೂ ಓದಿ: ಮೋದಿ, ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಸ್ಮೃತಿ ಇರಾನಿ – ಬಿಜೆಪಿ ಮೊದಲ ಪಟ್ಟಿಯಲ್ಲಿರೋ ಪ್ರಮುಖರು ಯಾರ‍್ಯಾರು?

Press meet

ಭೋಪಾಲ್‌ನಲ್ಲಿ ಬಿಜೆಪಿ ಪ್ರಜ್ಞಾ ಠಾಕೂರ್ ಬದಲಿಗೆ ಅಲೋಕ್ ಶರ್ಮಾ ಅವರನ್ನು ಈ ಬಾರಿ ಕಣಕ್ಕಿಳಿಸಿದೆ. 2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ, ಫೈರ್‌ಬ್ರಾಂಡ್ ನಾಯಕಿಯನ್ನು ಕಳೆದ ಬಾರಿ ನಾಮನಿರ್ದೇಶನ ಮಾಡಿದ್ದು ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ಆ ನಂತರದ ಐದು ವರ್ಷಗಳಲ್ಲಿ ಪ್ರಜ್ಞಾ ಠಾಕೂರ್‌ ಹಲವಾರು ವಿವಾದಗಳಲ್ಲಿ ಸಿಲುಕಿಕೊಂಡಿದ್ದರು. ಆರೋಗ್ಯದ ಕಾರಣ ನೀಡಿ ಜಾಮೀನಿನ ಮೇಲೆ ಹೊರ ಬಂದರು. ಇವರನ್ನು ಹೆಚ್ಚು ಸಂಕಷ್ಟಕ್ಕೆ ಸಿಲುಕಿಸಿದ ವಿವಾದವೆಂದರೆ ಮಹಾತ್ಮ ಗಾಂಧಿಯನ್ನು ಗುಂಡಿಕ್ಕಿ ಕೊಂದ ನಾಥೂರಾಂ ಗೋಡ್ಸೆಯನ್ನು “ದೇಶಭಕ್ತ” ಎಂದು ಕರೆದದ್ದು. ಠಾಕೂರ್‌ ಹೇಳಿಕೆಗೆ ಸ್ವತಃ ಪ್ರಧಾನಿ ಮೋದಿ ಅವರೂ ಅಸಮಾಧಾನ ಹೊರಹಾಕಿದ್ದರು.

ಹಾಗೆಯೇ, ಪಶ್ಚಿಮ ದೆಹಲಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಅವರನ್ನೂ ಬಿಜೆಪಿ ಮೊದಲ ಪಟ್ಟಿಯಿಂದ ಕೈಬಿಡಲಾಗಿದೆ. ಪರ್ವೇಶ್‌ ಅವರು ಎರಡು ಬಾರಿ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ. 2020 ರ ದೆಹಲಿ ಚುನಾವಣೆಗೆ ಮುಂಚಿತವಾಗಿ ಶಾಹೀನ್ ಬಾಗ್ ಪ್ರತಿಭಟನೆಯ ಸಂದರ್ಭದಲ್ಲಿ ವರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿಭಟನಾಕಾರರನ್ನು ಒಂದು ಗಂಟೆಯಲ್ಲಿ ತೆರವುಗೊಳಿಸಲಾಗುವುದು ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: BJP Lok Sabha Candidates: ಮೊದಲ ಪಟ್ಟಿಯಲ್ಲಿ ಯಾವ ರಾಜ್ಯಕ್ಕೆ ಎಷ್ಟು ಸೀಟು?

BJP Pressmeet 2

ವಿವಾದಾತ್ಮಕ ಹೇಳಿಕೆಯಿಂದಾಗಿ ಟಿಕೆಟ್‌ ಸಂಕಷ್ಟ ತಂದುಕೊಂಡ ಮತ್ತೊಬ್ಬ ಸಂಸದರೆಂದರೆ ದಕ್ಷಿಣ ದೆಹಲಿ ಸಂಸದ ರಮೇಶ್ ಬಿಧುರಿ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಲೋಕಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಬಿಧುರಿ ಅವರು ಅಮ್ರೋಹಾ ಸಂಸದ ಡ್ಯಾನಿಶ್ ಅಲಿ ಅವರಿಗೆ ಇಸ್ಲಾಮಾಫೋಬಿಕ್ ನಿಂದನೆ ಮಾಡಿದ್ದರು. ಅವಹೇಳನಕಾರಿ ಹೇಳಿಕೆಗಳು ಕ್ಯಾಮೆರಾದಲ್ಲಿ ಸೆರೆಯಾಗಿ, ಭಾರೀ ಗದ್ದಲಕ್ಕೆ ಕಾರಣವಾಗಿತ್ತು. ದಕ್ಷಿಣ ದೆಹಲಿಯ ಸಂಸದರು ನಂತರ ಕ್ಷಮೆಯಾಚಿಸಿದರೂ, ಬಿಜೆಪಿಯ ಮೊದಲ ಪಟ್ಟಿಯಲ್ಲಿ ಅದು ಸಾಕಾಗಲಿಲ್ಲ ಎಂದು ತೋರಿಸುತ್ತದೆ.

ಬಿಜೆಪಿ ಕೈಬಿಟ್ಟ ಇತರ ಪ್ರಮುಖ ದೆಹಲಿ ಸಂಸದರಲ್ಲಿ ಮೀನಾಕ್ಷಿ ಲೇಖಿ ಮತ್ತು ಹರ್ಷವರ್ಧನ್ ಸೇರಿದ್ದಾರೆ. 2019 ರ ಚುನಾವಣೆಯಲ್ಲಿ ರಾಷ್ಟ್ರ ರಾಜಧಾನಿಯ ಎಲ್ಲಾ ಸ್ಥಾನವನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಜಂಟಿ ವಿರೋಧವನ್ನು ಎದುರಿಸುತ್ತಿದೆ. ಎಎಪಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಬಿಜೆಪಿ ದಿಗ್ಗಜರಾದ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಹಾಗೂ ವಕೀಲೆ ಬಾನ್ಸುರಿ ಸ್ವರಾಜ್‌ ಅವರು ನವದೆಹಲಿಯಿಂದ ಕಣಕ್ಕಿಳಿದಿದ್ದಾರೆ. ಇದನ್ನೂ ಓದಿ: Lok Sabha: ಸುಷ್ಮಾ ಸ್ವರಾಜ್‌ ಪುತ್ರಿ ಬಾನ್ಸುರಿ ಸ್ವರಾಜ್‌ಗೆ ಬಿಜೆಪಿ ಟಿಕೆಟ್‌

ಪ್ರಜ್ಞಾ ಠಾಕೂರ್, ರಮೇಶ್ ಬಿಧುರಿ ಮತ್ತು ಪರ್ವೇಶ್ ವರ್ಮಾ ಅವರಂತಹ ನಾಯಕರು ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದ ಪಕ್ಷವನ್ನು ಮುಜುಗರಕ್ಕೀಡು ಮಾಡಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಅವರಿಗೆ ಟಿಕೆಟ್ ನಿರಾಕರಣೆ ಸಾರ್ವಜನಿಕ ಜೀವನದಲ್ಲಿ ಸೌಜನ್ಯವನ್ನು ಕಾಪಾಡಿಕೊಳ್ಳಬೇಕು ಎಂಬ ಸಂದೇಶವನ್ನು ನೀಡುತ್ತದೆ. ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು ಎಂದು ಪ್ರಧಾನಿ ಹಲವು ಸಂದರ್ಭಗಳಲ್ಲಿ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದ್ದರು ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

Share This Article