ಬೆಂಗಳೂರು: ಕುರುಬ ಸಮುದಾಯ ಬಗ್ಗೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅಧ್ಯಯನ ಮಾಡಿ ಬಳಿಕ ಮಾತಾಡಬೇಕು ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಕಿಡಿಕಾರಿದ್ದಾರೆ.
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಬಗ್ಗೆ ಛಲವಾದಿ ನಾರಾಯಣಸ್ವಾಮಿ (Chalavadi Narayanswamy) ಟೀಕೆ ಮಾಡಿದ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದರು. ಛಲವಾದಿ ನಾರಾಯಣಸ್ವಾಮಿ ಕುರುಬ ಸಮುದಾಯದ ಬಗ್ಗೆ ಕೇವಲವಾಗಿ ಮಾತಾಡಿದ್ದಾರೆ. ಕುರುಬರ ಕೊಡುಗೆ ಏನು ಅಂತ ಕೇಳಿದ್ದಾರೆ. ಛಲವಾದಿ ಅವರೇ ನೀವು ವಿರೋಧ ಪಕ್ಷದಲ್ಲಿ ಇದ್ದೀರಾ ಅಧ್ಯಯನ ಮಾಡಿಕೊಳ್ಳಿ. 1977 ರವರೆಗೂ ಕುರುಬ ಸಮುದಾಯ ಎಸ್ಟಿಯಲ್ಲಿತ್ತು. 1977 ಹಾವನೂರು ಆಯೋಗ ಎಸ್ಟಿ ಸಮುದಾಯದಿಂದ ಮೋಸ್ಟ್ ಬ್ಯಾಕ್ ವರ್ಡ್ ಕ್ಲಾಸ್ ಕ್ಯಾಟಗರಿಗೆ ಬದಲಾವಣೆ ಮಾಡಿತ್ತು. ಈಗ ಕುರುಬ ಸಮುದಾಯವನ್ನು ಮತ್ತೆ ಎಸ್ಟಿಗೆ ಸೇರಿಸಿ ಅಂತ ಕೇಳ್ತಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಮ್ಮದು ಜಾತ್ಯಾತೀತ ಸರ್ಕಾರ ಆಗಿರೋದಕ್ಕೆ ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ ಮಾಡಿಸಿರೋದು: ಪ್ರದೀಪ್ ಈಶ್ವರ್
ಕುರುಬ ಸಮುದಾಯ ಕೊಡುಗೆ ಬಗ್ಗೆ ನಾರಾಯಣಸ್ವಾಮಿ ಮಾತಾಡೋದು ಸರಿಯಲ್ಲ. ದಕ್ಷಿಣ ಭಾರತವನ್ನ ಆಳಿದ್ದು ಕುರುಬರು. ಕರ್ನಾಟಕಕಕ್ಕೆ ಹೆಚ್ಚು ಬಜೆಟ್ ಕೊಟ್ಟಿರೋದು ಕುರುಬ ಸಮುದಾಯ ಸಿದ್ದರಾಮಯ್ಯ ಅವರು. ಬ್ರಿಟಿಷರು ಕುರುಬರನ್ನ ನೋಡಿದ್ರೆ ಹೆದರುತ್ತಿದ್ದರು. ಕುರುಬ ಸಮುದಾಯ ಇಡೀ ದೇಶದಲ್ಲಿದೆ. ಅವರ ಸಮುದಾಯದ ಮೀಸಲಾತಿಗೆ ಅವರು ಪ್ರಯತ್ನ ಮಾಡ್ತಾರೆ. ಛಲವಾದಿ ಅವರೇ ಯಾಕೆ ಮೀಸಲಾತಿಗೆ ವಿರೋಧ ಮಾಡ್ತೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.
ನಮ್ಮದು ಬಲಿಜ ಸಮುದಾಯ, 3ಎ ಗೆ ಹಾಕಿದ್ದಾರೆ. 2ಎ ಗೆ ಸೇರಿಸಿ ಅಂತ ಸಿಎಂಗೆ ಮನವಿ ಮಾಡಿದ್ದೇವೆ. ಇದರಲ್ಲಿ ಏನು ತಪ್ಪು. ಕುರುಬರು ಕೇಳೋದು ಅವರ ಹಕ್ಕು. ಎಸ್ಟಿಗೆ ಸೇರಿಸೋದು, ಬಿಡೋದು ಕೇಂದ್ರಕ್ಕೆ ಬಿಟ್ಟಿದ್ದು. ಛಲವಾದಿ ನಾರಾಯಣಸ್ವಾಮಿ ಯಾಕೆ ಮೂಗು ತೂರಿಸುತ್ತಾರೆ. ಸ್ವಲ್ಪ ಓದಿಕೊಳ್ಳಿ, ಬಾಯಿಗೆ ಬಂದಂತೆ ಮಾತಾಡಬೇಡಿ. ನಾರಾಯಣಸ್ವಾಮಿಗೆ ಅಸ್ತಿತ್ವದ ಪ್ರಶ್ನೆ ಬಂದಿದೆ. ಹಾಗಾಗಿ ಈ ರೀತಿ ಮಾತಾಡ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಎಸ್ಟಿ ಮೀಸಲಾತಿಗೆ ಮಾಜಿ ಸಚಿವ ಈಶ್ವರಪ್ಪ ವಿರೋಧ ಪಡಿಸಿದ ವಿಚಾರವಾಗಿ ಮಾತನಾಡಿದ ಅವರು, ಈಶ್ವರಪ್ಪ ಅವರೇ ಕುರುಬ ಮಕ್ಕಳು ಬೆಳೆಯೋದು ಬೇಡ್ವಾ? ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಿದರೆ ಎಸ್ಟಿ ಮೀಸಲಾತಿ ಜಾಸ್ತಿ ಆಗುತ್ತದೆ. ಯಾರು ಆತಂಕ ಪಡೆಯಬೇಡಿ. ಈಶ್ವರಪ್ಪ ಅವರೇ ನೀವು ದೊಡ್ಡವರಿದ್ದೀರಾ. ನಿಮ್ಮ ಸಮುದಾಯದ ಮಕ್ಕಳು ಬೆಳೆಯೋದು ಬೇಡ್ವಾ? ಮೀಸಲಾತಿ ಯಾಕೆ ಮುಖ್ಯ ಅಂತ ನನಗೆ ಗೊತ್ತು. ಇದರಲ್ಲಿ ಈಶ್ವರಪ್ಪ, ಛಲವಾದಿ ನಾರಾಯಣಸ್ವಾಮಿ ಮೂಗು ತೂರಿಸೋದು ಬೇಡ ಎಂದಿದ್ದಾರೆ.