ಕೋಲ್ಕತ್ತಾ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕ್ಷಣಗಣನೆ ಬಾಕಿಯಿದೆ. ಶನಿವಾರ 7:30ಕ್ಕೆ ಆರ್‌ಸಿಬಿ ಮತ್ತು ಕೆಕೆಆರ್ ನಡುವೆ ಮೊದಲ ಪಂದ್ಯ ನಡೆಯಲಿದೆ. ಆದ್ರೆ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಈಡನ್‌ಗಾರ್ಡನ್‌ನಲ್ಲಿ ನಿಗದಿಯಾಗಿರುವ ಉದ್ಘಾಟನಾ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.
18ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ವರ್ಣರಂಜಿತ ಉದ್ಘಾಟನಾ ಸಮಾರಂಭದ ಮೂಲಕ ಪ್ರತಿಷ್ಠಿತ ಮೈದಾನದಲ್ಲಿ ಚಾಲನೆ ನೀಡಲು ಐಪಿಎಲ್ ಮಂಡಳಿ ಹಾಗೂ ಬಿಸಿಸಿಐ ಸಕಲ ಸಿದ್ಧತೆ ಮಾಡಿಕೊಂಡಿದೆ. ಆದ್ರೆ ಹವಾಮಾನ ಇಲಾಖೆಯ ಮುನ್ಸೂಚನೆ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಬಹುದು. ಇದನ್ನೂ ಓದಿ: ಟಿಬಿ ಜಾಗೃತಿ ಕ್ರಿಕೆಟ್ ಆಡಲಿದ್ದಾರೆ ಬಿಗ್ ಬಿ, ಎಸ್‌ಆರ್‌ಕೆ, ಸಲ್ಮಾನ್ ಖಾನ್
ಈ ಬಾರಿಯು ಐಪಿಎಲ್ ಟೂರ್ನಿಯು ಮಾ.22ರಿಂದ ಕೋಲ್ಕತಾದಲ್ಲಿ ಆರಂಭವಾಗಿ ಮೇ 25ರಂದು ಕೋಲ್ಕತ್ತಾದಲ್ಲಿಯೇ ಕೊನೆಯಾಗಲಿದೆ. ಮೇ 18ರ ತನಕ ಲೀಗ್ ಹಂತದ ಪಂದ್ಯ ನಡೆಯಲಿದ್ದು, ಮೇ 20ರಂದು ಮೊದಲ ಕ್ವಾಲಿಫೈಯರ್, ಮೇ 21ರಂದು ಎಲಿಮಿನೇಟರ್ ಸುತ್ತು ಹೈದರಾಬಾದ್‌ನಲ್ಲಿ ನಡೆಯಲಿದೆ. ಮೇ 23ರಂದು ಕ್ವಾಲಿಫೈಯರ್-2 ಕೋಲ್ಕತಾದಲ್ಲಿ ನಿಗದಿಯಾಗಿದೆ. ಒಟ್ಟು 10 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು, 13 ನಗರಗಳಲ್ಲಿ 65 ದಿನಗಳ ಕಾಲ ಒಟ್ಟು 74 ಪಂದ್ಯಗಳು ನಡೆಯಲಿವೆ. ಡಬಲ್ ಹೆಡರ್ ಪಂದ್ಯಗಳು ಇರುವಾಗ ಮಧ್ಯಾಹ್ನದ ಪಂದ್ಯ 3:30 ಹಾಗೂ ರಾತ್ರಿ ಪಂದ್ಯ 7:30ಕ್ಕೆ ಆರಂಭವಾಗಲಿದೆ.
ಈಡನ್ ಗಾರ್ಡನ್ಸ್ ಸ್ಟೇಡಿಯಂ ಸುತ್ತಮುತ್ತ ಭಾರೀ ಮೋಡ ಕವಿದಿದ್ದು, ಗುರುವಾರ ಮುನ್ನಚ್ಚರಿಕೆಯ ಕ್ರಮವಾಗಿ ಮೈದಾನದ ಸಿಬ್ಬಂದಿ ಆಡುವ ಪ್ರದೇಶದಲ್ಲಿ ಹೊದಿಕೆಗಳನ್ನು ಹಾಸಿದ್ದಾರೆ. ಇದನ್ನೂ ಓದಿ: ಐಪಿಎಲ್ 2025: ಮೊದಲ 3 ಪಂದ್ಯಗಳಿಗೆ ರಾಜಸ್ಥಾನ ರಾಯಲ್ಸ್‌ಗೆ ರಿಯಾನ್ ಪರಾಗ್ ಕ್ಯಾಪ್ಟನ್
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈ ಪ್ರದೇಶದಲ್ಲಿ ‘ಆರೆಂಜ್ ಅಲರ್ಟ್‘ಘೋಷಿಸಿದೆ. ಶನಿವಾರದ ತನಕ ಗುಡುಗು, ಮಿಂಚು ಹಾಗೂ ಬಿರುಗಾಳಿಯೊಂದಿಗೆ ಹಗುರ ಹಾಗೂ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಮುನ್ಸೂಚನೆ ನೀಡಿದೆ. ಇಂದು ಸಹ ಕೋಲ್ಕತ್ತಾದಲ್ಲಿ ಮಳೆಯಾಗಿದ್ದರಿಂದ ಅಭ್ಯಾಸ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಐಪಿಎಲ್‌ನ ಉದ್ಘಾಟನಾ ದಿನವಾದ ಮಾರ್ಚ್ 22ರಂದು ಗರಿಷ್ಠ ಪ್ರಮಾಣದ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ಪಂದ್ಯ ರದ್ದಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಪಂದ್ಯ ರದ್ದಾದ್ರೆ, ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಸಿಗಲಿದೆ. ಇದನ್ನೂ ಓದಿ: IPl 2025 | ರನ್ ಹೊಳೆ, ದಾಖಲೆಗಳ ಸುರಿಮಳೆ – ಇಲ್ಲಿದೆ ಐತಿಹಾಸಿಕ ದಾಖಲೆಗಳ ಪಟ್ಟಿ