Bengaluru CityKarnatakaLatestMain PostUncategorized

ಆಸ್ಟ್ರೇಲಿಯಾದಲ್ಲಿ ಆಪ್ತರಿಂದಲೇ ಟೆಕ್ಕಿ ಪ್ರಭಾ ಹತ್ಯೆ? ರಾಜ್ಯದಿಂದಲೇ ಸುಪಾರಿ?

ಬೆಂಗಳೂರು: ಆಸ್ಟ್ರೇಲಿಯಾದಲ್ಲಿ ಹತ್ಯೆ ಗೀಡಾದ ನಗರದ ಸಾಫ್ಟ್ ವೇರ್ ಉದ್ಯೋಗಿ ಪ್ರಭಾಶೆಟ್ಟಿ(41) ಅವರನ್ನು ಆಪ್ತರೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾರಾ ಎನ್ನುವ ಶಂಕೆ ಈಗ ಎದ್ದಿದೆ.

ಕೊಲೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಡ್ನಿಯ ಪರ್ರಾಮಟ್ಟ ಪೊಲೀಸರು, ಪ್ರಭಾ ಶೆಟ್ಟಿ ಕುಟುಂಬದ ಆಪ್ತರಿಂದಲೇ ಹತ್ಯೆ ನಡೆದಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಸದ್ಯದಲ್ಲೇ ಈ ಕೊಲೆಯ ರಹಸ್ಯ ಬಹಿರಂಗವಾಗಲಿದೆ ಎಂದು ಅಲ್ಲಿನ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ಸಿಐಡಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿಗೆ ಬಂದಿದ್ದ ತಂಡ: ನ್ಯೂ ಸೌತ್ ವೇಲ್ಸ್ ಪೊಲೀಸ್ ತಂಡ ಜ.14ರಂದು ಬೆಂಗಳೂರಿಗೆ ಆಗಮಿಸಿದ ಪ್ರಭಾ ಕುಟುಂಬದ 28 ಮಂದಿಯನ್ನು ವಿಚಾರಣೆ ನಡೆಸಿದ್ದರು. ಪ್ರಭಾ ಪತಿ ಅರುಣ್‍ಕುಮಾರ್, ಅತ್ತೆ, ಮಾವ, ಬಾವಂದಿರು, ಬಂಟ್ವಾಳದ ಅಮ್ಟೂರಿನಲ್ಲಿರುವ ಪ್ರಭಾ ಪೋಷಕರು, ಸಹೋದರರು, ಅಷ್ಟೇ ಅಲ್ಲದೇ ಪ್ರಭಾ ಕೆಲಸ ಮಾಡುತ್ತಿದ್ದ `ಮೈಂಡ್ ಟ್ರೀ’ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದ ಹರಿಪ್ರಸಾದ್, ಶ್ವೇತಾ ಸೇರಿದಂತೆ ಹಲವರ ವಿಚಾರಣೆ ನಡೆಸಿ ವಿಡಿಯೋ ರೆಕಾರ್ಡ್ ಮಾಡಿ ಜ.28ರಂದು ಆಸ್ಟ್ರೇಲಿಯಾಗೆ ತೆರಳಿತ್ತು.

ಶಂಕೆ ಮೂಡಿದ್ದು ಯಾಕೆ?
ಆಸ್ತಿ ವಿಚಾರವಾಗಿ ಸಂಬಂಧಿಯೊಬ್ಬ ಪ್ರಭಾ ಪೋಷಕರ ಜೊತೆ ಗಲಾಟೆ ಮಾಡುತ್ತಿದ್ದ. ಮದುವೆಯಾಗಿದ್ದರೂ ಆತ ಬೇರೊಬ್ಬ ಮಹಿಳೆಯ ಜೊತೆ ಸಂಬಂಧ ಹೊಂದಿದ್ದ. ಆಸ್ತಿಯನ್ನು ಪಡೆದು ಆಕೆಯನ್ನು ಮದುವೆಯಾಗಲು ಆತ ಮುಂದಾಗಿದ್ದ. ಆದರೆ ಆತನ ಈ ಪ್ರಯತ್ನಕ್ಕೆ ಪ್ರಭಾ ಅಡ್ಡಿಯಾಗಿದ್ದರು. 2015ರಲ್ಲಿ ಪ್ರಭಾ ಬೆಂಗಳೂರಿಗೆ ಹಿಂದಿರಗಬೇಕಿತ್ತು. ಈ ವಿಚಾರ ತಿಳಿದು ಆಸ್ಟ್ರೇಲಿಯಾದಲ್ಲಿ ಸಂಬಂಧಿ ಹೊಂದಿದ್ದ ಈತ ಅಲ್ಲೇ ಸುಪಾರಿ ನೀಡಿ ಹತ್ಯೆ ಮಾಡಿಸಿರಬಹುದು ಎನ್ನುವ ಶಂಕೆಯ ಆಧಾರದಲ್ಲಿ ಪೊಲೀಸರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಆ ಸಂಬಂಧಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

`ಮೈಂಡ್ ಟ್ರಿ’ ಕಂಪೆನಿಯಲ್ಲಿ ಸೀನಿಯರ್ ಟೆಕ್ನಿಕಲ್ ಅನಲಿಸ್ಟ್ ಆಗಿದ್ದ ಪ್ರಭಾ, 2012 ರಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಸ್ಟ್ರಾತ್‍ಫೀಲ್ಡ್ ಪ್ರದೇಶದಲ್ಲಿ ನೆಲೆಸಿದ್ದ ಅವರು, 2015ರ ಮಾರ್ಚ್ 7ರಂದು ಕಚೇರಿಯಿಂದ ಬರುತ್ತಿದ್ದಾಗ ಮನೆಯಿಂದ 300 ಮೀಟರ್ ದೂರದಲ್ಲೇ ಬರ್ಬರವಾಗಿ ಕೊಲೆಯಾಗಿದ್ದರು.

ಕೊಲೆ ತನಿಖೆಯ ವಿಚಾರಣೆ ಆರಂಭಿಸಿದ್ದ ಅಲ್ಲಿನ ಪೊಲೀಸರು 2016ರ ಫೆಬ್ರವರಿವರೆಗೆ ಎರಡು ಸಾವಿರ ಜನರನ್ನು ವಿಚಾರಣೆ ನಡೆಸಿ, 250 ಹೇಳಿಕೆಗಳನ್ನು ಪಡೆದಿದ್ದರು. ಆದರೂ ಆರೋಪಿಯ ಸುಳಿವು ಸಿಕ್ಕಿರಲಿಲ್ಲ.

Leave a Reply

Your email address will not be published. Required fields are marked *

Back to top button