-ಲಾಕ್‍ಡೌನ್ ಸಮಯ ಸದುಪಯೋಗ ಮಾಡ್ಕೊಂಡ್ರು
-ಕುಟುಂಬಸ್ಥರ ಜೊತೆ ಸೇರಿ 6 ದಿನದಲ್ಲಿ ಬಾವಿ ನಿರ್ಮಾಣ
ಉಡುಪಿ: ಲಾಕ್‍ಡೌನ್ ವೇಳೆ ಮನೆಯಲ್ಲಿ ಕಾಲಹರಣ ಮಾಡದ ಉಡುಪಿಯ ಪವರ್ ಲಿಫ್ಟರ್ ಅಕ್ಷತಾ ಪೂಜಾರಿ ಕುಟುಂಬಸ್ಥರ ಜೊತೆ ಸೇರಿ 25 ಅಡಿ ಆಳದ ಬಾವಿ ತೋಡಿದ್ದಾರೆ.
ಉಡುಪಿಯ ಅಕ್ಷತಾ ಪೂಜಾರಿ ಬೋಳ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಚಿನ್ನದ ಪದಕ, ಏಕಲವ್ಯ ಪ್ರಶಸ್ತಿ ಸಹ ಪಡೆದುಕೊಂಡಿದ್ದಾರೆ. ಕೊರೊನಾ ಲಾಕ್‍ಡೌನ್ ನಿಂದಾಗಿ ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿರುವ ನಿವಾಸದಲ್ಲಿ ಕುಟುಂಬಸ್ಥರ ಜೊತೆಯಲ್ಲಿಯೇ ಇದ್ದಾರೆ. ಈ ಬಾರಿ ಕೊರೋನಾ ಸಂದರ್ಭ ಕುಟುಂಬದ ಸದಸ್ಯರ ಜೊತೆ ಸೇರಿ ಸ್ವಂತ ಬಾವಿ ನಿರ್ಮಾಣ ಮಾಡಿದ್ದಾರೆ.
Advertisement
Advertisement
2012ರಿಂದಲೂ ಹಲವಾರು ಅಂತರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಚಿನ್ನದ ಪದಕ ಗೆದ್ದಿದ್ದಾರೆ. ಆದರೆ ಈ ಬಾರಿ ಲಾಕ್‍ಡೌನ್ ನಿಂದ ಯಾವುದೇ ಕ್ರೀಡಾಕೂಟ ಇಲ್ಲ, ಹಾಗಾಗಿ ಅಕ್ಷತಾ ಪೂಜಾರಿ ಮನೆಯಲ್ಲಿಯೇ ಇದ್ದಾರೆ. ಕರಾವಳಿಯಲ್ಲಿ ಈಗ ಬಿರು ಬೇಸಿಗೆ ಸಮಯವಾದ ಕಾರಣ ಮನೆಯ ಹಳೆಯ ಬಾವಿಯಲ್ಲಿ ಇದ್ದ ಅಲ್ಪ ಸ್ಪಲ್ಪ ನೀರು ಇಂಗಿತ್ತು. ಹೀಗಾಗಿ ಹೊಸ ಬಾವಿ ತೋಡುವ ಆಲೋಚನೆ ಅಕ್ಷತಾ ಪೂಜಾರಿ ಅವರಿಗೆ ಬಂದು ತಮ್ಮ ಸಹೋದರರ ಜೊತೆಗೂಡಿ ಮನೆಯ ಹತ್ತಿರವೇ ಹೊಸ ಬಾವಿ ನಿರ್ಮಿಸಿದ್ದಾರೆ.
Advertisement
Advertisement
ಲಾಕ್‍ಡೌನ್ ಸಂದರ್ಭ ಬಾವಿ ನಿರ್ಮಾಣ ಕಾರ್ಯಕ್ಕೆ ಆಳುಗಳು ಸಿಗದೇ ಮನೆಯವರೇ ಜೊತೆ ಸೇರಿ ಸತತ ಆರು ದಿನಗಳ ಕಾಲ ಪರಿಶ್ರಮ ಪಟ್ಟು 25 ಅಡಿ ಬಾವಿ ತೋಡಿದ್ದಾರೆ. ಚೆನ್ನಾಗಿ ನೀರು ಸಿಕ್ಕಿದೆ. ಇದರಿಂದ ಮನೆಯ ದೊಡ್ಡ ಸಮಸ್ಯೆಯನ್ನು ನಿವಾರಣೆ ಮಾಡಿದ್ದಾರೆ.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ಅಕ್ಷತಾ, ಲಾಕ್‍ಡೌನ್ ನಿಂದಾಗಿ ಜಿಮ್ ಗೂ ಹೋಗಲು ಸಾಧ್ಯವಿರಲಿಲ್ಲ. ನಮಗೆ ಬಾವಿಯಲ್ಲಿ ನೀರು ಸಿಗುತ್ತೆ ಎಂಬುದರ ಪರಿಕಲ್ಪನೆಯೂ ಇರಲಿಲ್ಲ. ಮೂವರು ಅಣ್ಣಂದಿರ ಜೊತೆ ಸೇರಿ ಬಾವಿ ತೋಡಲು ಆರಂಭಿಸಿದೇವು. ಐದು ದಿನಗಳಲ್ಲಿ 25 ಅಡಿ ಬಾವಿ ತೋಡಿದ್ರೂ ನೀರು ಸಿಗಲಿಲ್ಲ. ಸಂಜೆ ಕೆಲಸ ಮುಗಿಸಿ ಮೇಲೆ ಬರುವ ವೇಳೆ ಮೂಲೆಯಿಂದ ನೀರು ಬಂದಿತು ಎಂದು ಹೇಳುತ್ತಾರೆ.
ಅಕ್ಷತಾ ಅವರು ರಾಜ್ಯ ಮಟ್ಟದಲ್ಲಿ 10 ಚಿನ್ನ, 2 ಬೆಳ್ಳಿ ಪದಕಗಳೊಂದಿಗೆ 5 ಬಾರಿ ಸ್ಟ್ರಾಂಗ್ ವುಮನ್ ಪ್ರಶಸ್ತಿ, ರಾಷ್ಟ್ರ ಮಟ್ಟದಲ್ಲಿ 10 ಚಿನ್ನ, 2 ಬೆಳ್ಳಿ ಪದಕಗಳೊಂದಿಗೆ 4 ಬಾರಿ ಸ್ಟ್ರಾಂಗ್ ವುಮನ್ ಪ್ರಶಸ್ತಿ ಗೆದ್ದಿದ್ದಾರೆ. ಏಷ್ಯಾ ಮಟ್ಟದಲ್ಲೂ 4 ಬಾರಿ ಚಿನ್ನ, ಕಾಮನ್ ವೆಲ್ತ್ ಕೂಡದಲ್ಲಿ 8 ಚಿನ್ನ, ವಿಶ್ವ ಮಟ್ಟದಲ್ಲಿ 2 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.