ನವದೆಹಲಿ: ವಿವಿಧ ರಾಜ್ಯಗಳಲ್ಲಿ ಸಂಭವಿಸುತ್ತಿರುವ ವಿದ್ಯುತ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಲ್ಲಿದ್ದಲು ಸಾಗಾಟಕ್ಕೆ ಅನುಕೂಲವಾಗುವಂತೆ ಭಾರತೀಯ ರೈಲ್ವೆ ಇನ್ನೂ ಹೆಚ್ಚಿನ ರೈಲುಗಳನ್ನು ರದ್ದುಗೊಳಿಸಿದೆ.
ಭಾರತದ ವಿವಿಧ ರಾಜ್ಯಗಳಲ್ಲಿ ಕಲ್ಲಿದ್ದಲಿನ ಕೊರತೆ ಉಂಟಾಗಿದ್ದು, ಕಲ್ಲಿದ್ದಲು ಸಾಗಾಟಕ್ಕೆ ಅನುಕೂಲವಾಗುವಂತೆ ಮೇ 24ರ ವರೆಗೆ ಸುಮಾರು 1,100 ರೈಲುಗಳು ರದ್ದಾಗಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇದನ್ನೂ ಓದಿ: ದೆಹಲಿಯಲ್ಲಿ ಕೊರೊನಾ ಆರ್ಭಟ – GRPA ಆ್ಯಕ್ಷನ್ ಪ್ಲಾನ್‌ನಂತೆ ರೆಡ್‌ಅಲರ್ಟ್ ಘೋಷಣೆ
ಏಪ್ರಿಲ್ 19ರಂದು ದೇಶಾದ್ಯಂತ ಕಲ್ಲಿದ್ದಲು ಸಾಗಾಟಕ್ಕೆ ಅನುಕೂಲವಾಗುವಂತೆ ಸುಮಾರು 240 ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸುವುದಾಗಿ ರೈಲ್ವೆ ಇಲಾಖೆ ಘೋಷಿಸಿತ್ತು. ಇಲ್ಲಿ ವರೆಗೆ ಎಕ್ಸ್‌ಪ್ರೆಸ್ ರೈಲುಗಳ ಸುಮಾರು 500 ಟ್ರಿಪ್‌ಗಳನ್ನು ಹಾಗೂ ಪ್ಯಾಸೆಂಜರ್ ರೈಲುಗಳ 580 ಟ್ರಿಪ್‌ಗಳನ್ನು ರದ್ದುಗೊಳಿಸಿಲಾಗಿದೆ.
ಈ ತಿಂಗಳು ದೇಶಾದ್ಯಂತ ವಿದ್ಯುತ್ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದ್ದರಿಂದ ವಿವಿಧ ರಾಜ್ಯಗಳ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸಾಧ್ಯವಾದಷ್ಟು ಕಲ್ಲಿದ್ದಲು ಸಾಗಿಸಲು ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ಮತ್ತಷ್ಟು ಕಡಿಮೆ ಬೆಲೆಯಲ್ಲಿ ತೈಲ ನೀಡಿ – ರಷ್ಯಾ ಜೊತೆ ಭಾರತ ಚೌಕಾಶಿ
ದೇಶದ ಕೆಲವು ಭಾಗಗಳಲ್ಲಿ ಕಲ್ಲಿದ್ದಲು ಗಣಿ ಕಾರ್ಮಿಕರು ಮುಷ್ಕರವನ್ನೂ ನಡೆಸುತ್ತಿದ್ದು, ಇದರಿಂದ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ದೇಶದಲ್ಲಿರುವ 173 ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಪೈಕಿ 108 ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ತೀವ್ರವಾಗಿ ಕಡಿಮೆಯಾಗಿದೆ. ಇದರಿಂದ ಕೆಲವೇ ದಿನಗಳ ವರೆಗೆ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.