ಬೆಂಗಳೂರು: ಒಂದು ಬಡ ರೈತ ಕುಟುಂಬದಲ್ಲಿ ಹುಟ್ಟಿದ ಮಹಿಳೆಯೊಬ್ಬರು ಅಂಗವೈಕಲ್ಯವಿದ್ದರೂ, ಬಡತನವಿದ್ದರೂ ಪುಟ್ಟ ಗ್ರಾಮದಲ್ಲಿ ಹುಟ್ಟಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ.
ಹುಟ್ಟುತ್ತಲೇ ಅಂಗವೈಕಲ್ಯದಿಂದ ಹುಟ್ಟುವವರು ಇದು ದೊಡ್ಡ ಶಾಪ ಅಂದುಕೊಳ್ಳುತ್ತಾರೆ. ಅದರೆ ಅದೇ ಅಂಗವೈಕಲ್ಯ ನಮ್ಮ ಶಕ್ತಿ ಎಂದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಗ್ರಾಮೀಣ ಭಾಗದ ಒಂದು ಪುಟ್ಟ ಗ್ರಾಮ ನಾಗನಾಯಕನಹಳ್ಳಿಯಲ್ಲಿ ಜನಸಿದ ಗೌರಮ್ಮ ಸಾಧನೆ ಮಾಡಿದ್ದಾರೆ. ಪದವಿ ಮುಗಿಸಿ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಓದುವ ಛಲವನ್ನು ಬಿಡದೆ ಸಾಧನೆ ಮಾಡಿದ್ದಾರೆ. ರೈತ ಕುಟುಂಬದಲ್ಲಿ ಬೆಳೆದಿದ್ದ ಗೌರಮ್ಮ ಅವರು ಈಗ ಕೆಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಇಡೀ ಕುಟುಂಬಕ್ಕೂ ಹಾಗೂ ತಾಲೂಕಿಗೆ ಹೆಮ್ಮೆ ತರುವಂತಹ ಸಾಧನೆ ಮಾಡಿ ತೋರಿಸಿದ್ದಾರೆ. ಇದನ್ನೂ ಓದಿ: ಕೆಎಎಸ್ ಪರೀಕ್ಷೆಯಲ್ಲಿ ಪಾಸ್ – ಕೂಲಿ ಮಾಡಿ ಓದಿಸಿದ್ದ ತಾಯಿಗೆ ಮಗನ ಗಿಫ್ಟ್
Advertisement
Advertisement
ಹುಟ್ಟುತ್ತಲೇ ಅಂಗವೈಕಲ್ಯದಿಂದ ಹುಟ್ಟಿದ್ದ ಗೌರಮ್ಮ ಕುಟುಂಬದ ಸಹಕಾರದಿಂದ ಸರ್ಕಾರಿ ಶಾಲೆ ಹಾಗೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಬಿಟಿಎಲ್ ಕಾಲೇಜಿನಲ್ಲಿ ಪದವಿ ಮುಗಿಸಿದ ಬಳಿಕ ತಾವು ಓದಿದ್ದ ಆನೇಕಲ್ ತಾಲೂಕಿನ ಇಗ್ಗಲೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿಯೇ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗಲೇ ಐಎಎಸ್ ಹಾಗೂ ಕೆಎಎಸ್ ಪರೀಕ್ಷೆ ಬರೆದು ಸಾಧನೆ ಮಾಡಬೇಕೆಂದು ಗೌರಮ್ಮ ಅವರು ಛಲ ಹೊಂದಿದ್ದರು. ಅವರ ತಂದೆಗೂ ಸಹ ಮಗಳನ್ನು ಚೆನ್ನಾಗಿ ಓದಿಸಬೇಕೆಂದು ಕನಸು ಇತ್ತು. ಆದ್ದರಿಂದ ವ್ಯವಸಾಯ ಮಾಡುತ್ತಲೇ ಮಗಳಿಗೆ ವಿಧ್ಯಾಭ್ಯಾಸ ಮಾಡಿಸಿದ್ದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆಯ 12 ಮಂದಿ ಕೆಎಎಸ್ ಅಧಿಕಾರಿಗಳಾಗಿ ಆಯ್ಕೆ
Advertisement
Advertisement
ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಲೇ ಕೆಎಎಸ್ ಪರೀಕ್ಷೆಗೆ ತಯಾರಿ ಮಾಡಿಕೊಂಡು, ಪರೀಕ್ಷೆ ಎದುರಿಸಿದ ಗೌರಮ್ಮ ಅವರು ಮೊದಲನೇ ಹಂತದಲ್ಲಿಯೇ ತಹಶೀಲ್ದಾರ್ ಗ್ರೇಡ್ ಪರೀಕ್ಷೆ ಬರೆದು 1,500 ಅಂಕಗಳಿಗೆ 884 ಅಂಕ ಪಡೆಯುವ ಮೂಲಕ ಉತ್ತೀರ್ಣರಾಗಿದ್ದಾರೆ. ತಮ್ಮ ಸಾಧನೆಯಿಂದ ಕುಟುಂಬಕ್ಕೆ ಹಾಗೂ ತಾಲೂಕಿಗೆ ಹೆಮ್ಮೆ ತಂದು ಕೊಟ್ಟಿದ್ದಾರೆ.
ಗೌರಮ್ಮ ತಮ್ಮ ಗುರಿ ಹಾಗೂ ತಂದೆಯ ಆಸೆಯಂತೆ ಓದುವಾಗ ಸಾಕಷ್ಟು ಅಡೆತಡೆಗಳು ಎದುರಾದರು ಯಾವುದಕ್ಕೂ ಜಗ್ಗಲಿಲ್ಲ. ತಮ್ಮ ಕಠಿಣ ಪರಿಶ್ರಮ ಹಾಗೂ ಕುಟುಂಬದ ಸಹಕಾರದಿಂದ ಸಾಧನೆ ಮಾಡಿದ್ದಾರೆ. ಗೌರಮ್ಮ ಪೋಷಕರಿಗೆ ಏಳು ಜನ ಮಕ್ಕಳಿದ್ದು, ಗೌರಮ್ಮ ಕೊನೆಯ ಮಗಳು. ಕಷ್ಟದ ಸಂದರ್ಭದಲ್ಲಿಯೂ ಎಲ್ಲಾ ಮಕ್ಕಳನ್ನು ಹೆತ್ತವರು ಒಂಬತ್ತನೇ ಹಾಗೂ ಹತ್ತನೇ ತರಗತಿ ಓದಿಸಿದ್ದು, ಕೊನೆಯ ಮಗಳಾದ ಗೌರಮ್ಮ ಚೆನ್ನಾಗಿ ಓದಬೇಕು, ಉನ್ನತ ಸ್ಥಾನಕ್ಕೆ ಹೋಗಬೇಕೆನ್ನುವುದು ಅವರ ತಂದೆಯ ಕನಸಾಗಿತ್ತು. ಕಳೆದ ಮೂರು ವರ್ಷಗಳ ಹಿಂದೆ ತಂದೆ ಪಿಲ್ಲಣ್ಣ ಮೃತ ಪಟ್ಟರು ಸಹ ತಮ್ಮ ಛಲವನ್ನು ಬಿಡದೆ ಕುಟುಂಬದ ಸಹಕಾರದಿಂದ ಓದಿ, ಇಂದು ಗೌರಮ್ಮ ತಂದೆಯ ಕನಸನ್ನು ನನಸು ಮಾಡಿದ್ದಾರೆ. ಈ ಸಾಧನೆಯಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆಂದು ಗೌರಮ್ಮ ತಾಯಿ ಕೃಷ್ಣಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಣ್ಣಂದಿರ ಆಸೆ ಈಡೇರಿಸಿದ ಸಹೋದರ
ಅಂಗವೈಕಲ್ಯ ಹಾಗೂ ಬಡತನದ ನಡುವೆಯೂ ಒಂದು ಪುಟ್ಟ ಹಳ್ಳಿಯ ಹೆಣ್ಣುಮಗಳು ಎಲ್ಲರೂ ಮೆಚ್ಚುವಂತಹ ಸಾಧನೆ ಮಾಡಿದ್ದು ಕುಟುಂಬದವರಿಗೆ ಹಾಗೂ ತಾಲೂಕಿನ ಜನರಿಗೆ ಹೆಮ್ಮೆ ತಂದಿದೆ. ಅಂಗವೈಕಲ್ಯ ಹಾಗೂ ಬಡತನ ದೊಡ್ಡ ಶಾಪ ಅಂದುಕೊಳ್ಳುವಂತವರಿಗೆ ಗೌರಮ್ಮರ ಈ ಸಾಧನೆಯಿಂದ ನಿರಂತರ ಪರಿಶ್ರಮ ಹಾಗೂ ಶ್ರದ್ಧೆ ಇದ್ದರೆ ಯಾವುದನ್ನು ಬೇಕಾದರು ಸಾಧಿಸಿಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ.