ಕೋಲ್ಕತ್ತಾ: ಪಶ್ಚಿಮ ಬಂಗಾಳ (West Bengal) ಮುಖ್ಯಮಂತ್ರಿ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ (Mamata Banerjee) ಮತ್ತು ಅವರ ಸೋದರಳಿಯ, ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ.
ಮೇ 20 ರಂದು ಲೋಕಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಉಲುಬೇರಿಯಾದ ಫುಲೆಸ್ವರ್ ಪ್ರದೇಶದಲ್ಲಿ ಕೊಲೆ ಬೆದರಿಕೆ ಇರುವ ಪೋಸ್ಟರ್ ದೊರಕಿದೆ. ಬಿಳಿ ಬಟ್ಟೆಯ ತುಂಡಿನ ಮೇಲೆ ಸಿಕ್ಕ ಹಸಿರು ಶಾಯಿಯಲ್ಲಿ ಕೈಬರಹದ ಪೋಸ್ಟರ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಗಾಳಿ ಭಾಷೆಯಲ್ಲಿ ಬರೆಯಲಾದ ಪೋಸ್ಟರ್‌ನಲ್ಲಿ, ನಾನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಅವರನ್ನು ಕಾರಿಗೆ ಡಿಕ್ಕಿ ಹೊಡೆಸಿ ಕೊಲ್ಲುತ್ತೇನೆ. ಅದರ ನಂತರ ಎಲ್ಲರೂ ದೀಪಗಳನ್ನು ಬೆಳಗಿಸುತ್ತಾರೆ. ನನ್ನ ಬಳಿ ರಹಸ್ಯ ಪತ್ರವಿದೆ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ ಕೇಸ್ – ದೇಶದಲ್ಲೇ ಮೊದಲ ಬಾರಿಗೆ `ಎಎಪಿ’ ಅನ್ನು ಆರೋಪಿ ಎಂದು ಹೆಸರಿಸಿದ ಇಡಿ!
ರಹಸ್ಯ ಪತ್ರದ ಅರ್ಥವೇನೆಂದು ಇನ್ನೂ ಸ್ಪಷ್ಟವಾಗಿಲ್ಲ. ಇದು ತಮಾಷೆಯಾಗಿರಲೂಬಹುದು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಇದರ ಹಿಂದೆ ಒಬ್ಬ ವ್ಯಕ್ತಿ ಅಥವಾ ಗುಂಪು ಭಾಗಿಯಾಗಿದೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.