Bellary

ಅಂಚೆ ಉದ್ಯೋಗಿಯೊಬ್ಬರ 1 ಎಫ್‍ಬಿ ಪೋಸ್ಟ್ ನಿಂದ 200 ಎಕ್ರೆಯ ಕೊಟ್ಟೂರು ಕೆರೆ ಕ್ಲೀನ್!

Published

on

Share this

– ಸಾಮಾಜಿಕ ಜಾಲತಾಣದಿಂದ ಶುರುವಾಯ್ತು `ನಮ್ಮ ಕೆರೆ ನಮ್ಮ ಹಕ್ಕು’ ಆಂದೋಲನ

ಬಳ್ಳಾರಿ: ಫೇಸ್‍ಬುಕ್ ದುರ್ಬಳಕೆ ಆಗ್ತಿದೆ, ಜನರ ಆಮೂಲ್ಯ ಸಮಯ ಹಾಳಾಗ್ತಿದೆ ಎಂದು ಆರೋಪಿಸುವ ಮಂದಿಯೇ ಅಧಿಕ. ಆದರೆ ಜಿಲ್ಲೆಯಲ್ಲಿ ಅಂಚೆ ನೌಕರರೊಬ್ಬರ ಪೋಸ್ಟ್ ನಿಂದಾಗಿ ಇದೀಗ ದೊಡ್ಡದೊಂದು ಆಂದೋಲನ ಶುರುವಾಗಿದೆ.

ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ಕೊಟ್ರೇಶ್ ಎಂಬವರು ಹಾಕಿದ ಪೋಸ್ಟ್ ಗೆ ಇಂದು ಸಾವಿರಾರು ಯುವಕರಿಗೆ ಪ್ರೇರಣೆಯಾಗಿದೆ. ಕೊಟ್ರೇಶ್ ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೊಟ್ಟೂರು ಪಟ್ಟಣದ ನಿವಾಸಿ. ಕೊಟ್ಟೂರಿನ ಪುರಾತನ ಕಾಲದ 700 ಎಕರೆ ಕೆರೆಯಲ್ಲಿ ತುಂಬಿದ್ದ ಜಾಲಿ ಮುಳ್ಳುಗಳ ತೆರವು ಮಾಡಲು ಇವರು ಒಬ್ಬರೇ ಮುಂದಾಗಿದ್ದರು. ಕಳೆದ 5 ವಾರಗಳ ಹಿಂದೆ ರವಿವಾರ ದಿನ ಇವರು ಒಬ್ಬರೇ ಕರೆಯಲ್ಲಿನ ಜಾಲಿ ಮುಳ್ಳುಗಳ ತೆರವು ಮಾಡುವ ಕೆಲಸ ಆರಂಭಿಸಿದ್ದರು. ಕೆರೆ ಕ್ಲೀನ್ ಮಾಡೋ ಫೋಟೋವೊಂದನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ `ನಮ್ಮ ಕೆರೆ ನಮ್ಮ ಹಕ್ಕು’ ಕೆರೆ ಕ್ಲೀನ್ ಮಾಡೋಕೆ ಬನ್ನಿ ಅಂತಾ ಕರೆ ನೀಡಿದ್ದರು.

ನಮ್ಮ ಕೆರೆ ನಮ್ಮ ಹಕ್ಕು ಪೋಸ್ಟ್:
ಕೊಟ್ರೇಶ್ ಅವರು ಮಾಡಿದ ನಮ್ಮ ಕೆರೆ ನಮ್ಮ ಹಕ್ಕು ಪೋಸ್ಟ್ ನ್ನು ಗಮನಿಸಿದ ಸ್ಥಳೀಯರು ಇದೀಗ ಗುಂಪು ಗುಂಪಾಗಿ ಪ್ರತಿ ಭಾನುವಾರ ಕೆರೆ ಕ್ಲೀನ್ ಮಾಡೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅಂಚೆ ಕೋಟ್ರೇಶರ ಕೆರೆ ಕ್ಲೀನ್ ಮಾಡೋ ಉದ್ದೇಶ ಮನಗಂಡ ಸ್ಥಳೀಯರು ಕೆರೆಯಲ್ಲಿನ ಜಾಲಿಮುಳ್ಳುಗಳ ತೆರವಿಗೆ ತಮ್ಮ ಕೈಲಾದಷ್ಟೂ ಹಣ ನೀಡಿ ಸಹಾಯ ಮಾಡಿದ್ದಾರೆ. ಇನ್ನೂ ಕೆಲವರು ಸ್ವಪ್ರೇರಿತರಾಗಿ ಜೆಸಿಬಿ ಯಂತ್ರಗಳ ಬಾಡಿಗೆಯನ್ನು ಸಹ ನೀಡುವ ಮೂಲಕ ಕೆರೆಯಲ್ಲಿನ ಮುಳ್ಳುಗಳನ್ನು ತೆರವು ಮಾಡುತ್ತಿದ್ದಾರೆ.

ಅಂಚೆ ಕ್ರೋಟ್ರೇಶರೊಂದಿಗೆ ಇದೀಗ ಕೊಟ್ಟೂರಿನ ಸುಮಾರು 150ಕ್ಕೂ ಹೆಚ್ಚು ಯುವಕರು ಪ್ರತಿ ಭಾನುವಾರು ಕೆರೆ ಕ್ಲೀನ್ ಮಾಡುವ ಮೂಲಕ ಇದೂವರೆಗೂ ಬರೋಬ್ಬರಿ 200 ಎಕರೆಯಲ್ಲಿನ ಮುಳ್ಳುಗಳನ್ನು ತೆರವು ಮಾಡಲಾಗಿದೆ.

ಪುರಾತನ ಕಾಲದ ಈ ಕೊಟ್ಟೂರು ಕೆರೆ ಬರೋಬ್ಬರಿ 700 ಎಕರೆ ವಿಸ್ತಾರ ಹೊಂದಿದೆ. ಈಗಾಗಲೇ ಸ್ಥಳೀಯ ಯುವಕರು ಸ್ವಪ್ರೇರಣೆಯಿಂದ 200 ಎಕರೆ ವಿಸ್ತಾರದಲ್ಲಿನ ಜಾಲಿಮುಳ್ಳುಗಳನ್ನು ಕ್ಲೀನ್ ಮಾಡಿದ್ದಾರೆ. ಅಲ್ಲದೇ ಪ್ರತಿ ಭಾನುವಾರದಿಂದ ಭಾನುವಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸ್ವಪ್ರೇರಣೆಯಿಂದ ಆಗಮಿಸಿ ಕೆರೆ ಕ್ಲೀನ್ ಮಾಡುವ ಮೂಲಕ ಸರ್ಕಾರ ಜಿಲ್ಲಾಡಳಿತ ಮಾಡಬೇಕಾದ ಕೆಲಸವನ್ನು ಮಾಡುತ್ತಿದ್ದಾರೆ.

ಕೆರೆಗೆ ಬರೋ ನೀರಿನ ಮಾರ್ಗಗಳನ್ನು ಜಿಲ್ಲಾಡಳಿತ ಸರಿಪಡಿಸಿ ಮುಂದಿನ ದಿನಗಳಲ್ಲಿ ಕೆರೆಗೆ ನೀರು ಬರುವಂತೆ ಮಾಡಬೇಕಾಗಿದೆ. ಒಟ್ಟಾರೆ ಅಂಚೆ ಕೋಟ್ರೇಶರು ಫೇಸ್‍ಬುಕ್‍ನಲ್ಲಿ ಮಾಡಿದ ಪೊಸ್ಟ್ ಇದೀಗ ನೂರಾರು ಎಕರೆ ವಿಸ್ತಾರದ ಕೆರೆ ಕ್ಲೀನ್ ಮಾಡಲು ಪ್ರೇರಣೆಯಾಗಿದೆ.

 

 

Click to comment

Leave a Reply

Your email address will not be published. Required fields are marked *

Advertisement
Advertisement