ಹಲವು ವರ್ಷಗಳ ಕಸರತ್ತಿನ ಬಳಿಕ ರಾಜ್ಯ ಸರ್ಕಾರ ಅಂಗನವಾಡಿ ಮೇಲ್ವಿಚಾರಕಿ ಹುದ್ದೆಗೆ ನೇಮಕ ಪೂರ್ಣಗೊಳಿಸಿ 7 ತಿಂಗಳಾಗಿದೆ. 519 ಮೇಲ್ವಿಚಾರಕಿಯರನ್ನು ಸರ್ಕಾರ ಆಯ್ಕೆ ಮಾಡಿ, ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿದೆ. ಕಳೆದ ಜೂನ್ ತಿಂಗಳಲ್ಲೇ ಎಲ್ಲವೂ ನಡೆದು ಹೋಗಿದೆ. ಆದರೆ ದುರಂತ ಅಂದ್ರೆ ಈ ಮೇಲ್ವಿಚಾರಕಿಯರಿಗೆ 6 ತಿಂಗಳಿಂದ ಸಂಬಳವೂ ಇಲ್ಲ, ಕೆಲಸವೂ ಇಲ್ಲ.
ಹೌದು, ಅಂಗನವಾಡಿ ಮೇಲ್ವಿಚಾರಕಿಯರ ಹುದ್ದೆ ಹಲವು ವರ್ಷಗಳಿಂದ ಖಾಲಿ ಇತ್ತು. ಸರ್ಕಾರ ಈ ಸಂಬಂಧ ಕೆಪಿಎಸ್‍ಸಿ ಮೂಲಕ ನೇಮಕ ಪ್ರಕ್ರಿಯೆ ನಡೆಸಿದ್ದಲ್ಲದೇ, ನೂತನ ಮೇಲ್ವಿಚಾರಕಿಯರ ಪಟ್ಟಿ ಬಿಡುಗಡೆ ಮಾಡಿತು. ಬಹುತೇಕ ಎಲ್ಲರೂ ಕಳೆದ ಜೂನ್‍ನಲ್ಲಿ ಇಲಾಖೆಗೆ ವರದಿ ಮಾಡಿಕೊಂಡಿದ್ದೂ ಆಯ್ತು. ನಂತರ ತಂಡ ತಂಡವಾಗಿ ಹೊಸ ಮೇಲ್ವಿಚಾರಕಿಯರನ್ನು ತರಬೇತಿಗಾಗಿ ನಿಯೋಜನೆ ಮಾಡಲಾಯಿತು. ಮೊದಲ ಒಂದು ವಾರ ಉಜಿರೆಯಲ್ಲಿ ತರಬೇತಿ ಪಡೆದು ವಾಪಸ್ಸಾದ, ಆಯ್ಕೆಗೊಂಡವರಿಗೆ ಕೆಲವು ತಾಲೂಕು ಕೇಂದ್ರಗಳ ಸಿಡಿಪಿಒ ಕಚೇರಿಗಳಲ್ಲಿ 15 ದಿನಗಳ ಟ್ರೈನಿಂಗ್ ನೀಡಲಾಯಿತು. ಮತ್ತೆ ಒಂದು ತಿಂಗಳ ಕಾಲ ಉಜಿರೆಗೆ ಕಳುಹಿಸಿ ತರಬೇತಿ ಕೊಡಿಸಲಾಯಿತು. ಅದು ಮುಗಿದ ಬಳಿಕ, ಆಯ್ಕೆಗೊಂಡವರ ಜಿಲ್ಲೆಗಳಲ್ಲೇ ನಿಯೋಜನೆ ಮಾಡಿ, ಅಲ್ಲಿ ಇಲ್ಲಿ ಸಿಡಿಪಿಒ ಕಚೇರಿಗೆ ಕಳುಹಿಸಲಾಯಿತು. ಆದರೆ, ಈವರೆಗೂ ಈ ಎಲ್ಲಾ ಮೇಲ್ವಿಚಾರಕಿಯರಿಗೆ ಸ್ಥಳ ನಿಗದಿ ಮಾಡಿ ಹುದ್ದೆ ಕೊಟ್ಟಿಲ್ಲ. ಅಂದ್ರೆ, ನೇಮಕವಾಗಿ 6 ತಿಂಗಳಾದ್ರೂ ಅಧಿಕೃತವಾಗಿ ಹುದ್ದೆ ಎಲ್ಲಿ, ಹೇಗೆ ಎಂಬುದಿಲ್ಲ, ಜೊತೆಗೆ 6 ತಿಂಗಳಿಂದ ಸಂಬಳವೂ ಇಲ್ಲ.
Advertisement
Advertisement
ಹೀಗೆ ಯಾಕಾಯ್ತು ಅಂತಾ ನೋಡಿದ್ರೆ, ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೇಮಕ ಪ್ರಕ್ರಿಯೆ ನಡೆದು ಪಟ್ಟಿ ಬಿಡುಗಡೆ ಮಾಡಲಾಯಿತು. ಅದಾಗುತ್ತಿದ್ದಂತೆ ತರಬೇತಿಗೆ ನಿಯೋಜಿಸುವ ಸಂದರ್ಭದಲ್ಲಿ ರಾಜ್ಯದಲ್ಲಿ ಸರ್ಕಾರವೂ ಬದಲಾಯ್ತು. ನೂತನವಾಗಿ ಅಸ್ತಿತ್ವಕ್ಕೆ ಬಂದ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಳ್ಳದೇ ಸಂಪೂರ್ಣ ನಿರ್ಲಕ್ಷ್ಯ ಮಾಡಿತು. ಸಹಜವಾಗಿ ಇಂತಹ ಸಂದರ್ಭದಲ್ಲಿ ಇಲಾಖೆಯ ನಿರ್ದೇಶಕರು ಅಥವಾ ಸರ್ಕಾರದ ಕಾರ್ಯದರ್ಶಿಗಳು ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳ ನಿಯೋಜನೆ ಮಾಡಿ ಹುದ್ದೆ ಕೊಡಿಸಬೇಕು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಅದ್ಯಾವುದೂ ನಡೆಯಲೇ ಇಲ್ಲ.
Advertisement
519 ಅಭ್ಯರ್ಥಿಗಳಿಗೆ ಸ್ಥಳ ನಿಗದಿ ಮಾಡಿ ಹುದ್ದೆ ಕೊಡಿಸುವುದು ಸ್ವಲ್ಪ ಕಠಿಣ ಪ್ರಕ್ರಿಯೆಯಾದ್ರೂ, ಕೌನ್ಸೆಲಿಂಗ್ ಮೂಲಕ ಇದನ್ನು ಸುಲಭವಾಗಿ ಮಾಡುವ ಅವಕಾಶವಿತ್ತು. ಆದರೆ ಬಿಜೆಪಿ ಸರ್ಕಾರದ ನೂತನ ಸಚಿವರು ಇದಕ್ಕೆ ಅಡ್ಡಗಾಲು ಹಾಕಿದ್ದಾರೆ ಎನ್ನಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರ ಧೋರಣೆಯೇ ವಿಳಂಬಕ್ಕೆ ಕಾರಣ ಅನ್ನೋದು ನೂತನವಾಗಿ ಆಯ್ಕೆಯಾದ ಅಭ್ಯರ್ಥಿಗಳ ಆರೋಪ. ಅಧಿಕಾರಿಗಳ ಮೂಲಕ ಕೌನ್ಸೆಲಿಂಗ್ ನಡೆಸಿ ಪಾರದರ್ಶಕವಾಗಿ ಹುದ್ದೆ ನೀಡುವ ಕೆಲಸ ಮಾಡಬೇಕಾಗಿದ್ದ ಸಚಿವೆ ಶಶಿಕಲಾ ಜೊಲ್ಲೆ, ಅದೆಲ್ಲಾ ಬೇಡ ಅಂತಾ ತಾವೇ ನೇರವಾಗಿ ಈ ಕೆಲಸ ಮಾಡಲು ಮುಂದಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಸಚಿವರು ಈ 519 ಅಭ್ಯರ್ಥಿಗಳ ಪಟ್ಟಿಯಿರುವ ಕಡತ ತರಿಸಿಕೊಂಡು ಹುದ್ದೆ ಕೊಡ್ತೇನೆ ಎಂದು ಹೇಳಿ ಒಂದೂವರೆ ತಿಂಗಳು ಕಳೆದಿದೆ. ಸುಮಾರು 1 ತಿಂಗಳ ಹಿಂದೆ ಈ ಎಲ್ಲಾ ಅಭ್ಯರ್ಥಿಗಳನ್ನು ‘ಸಂವಹನ’ ಎಂಬ ಕಾರ್ಯಕ್ರಮದ ಹೆಸರಿನಲ್ಲಿ ಬೆಂಗಳೂರಿಗೆ ಕರೆಸಿಕೊಂಡು ಬಾಲಭವನದಲ್ಲಿ ಸಚಿವರು ಮಾತನಾಡಿದ್ದಾರೆ. ಯಾರೂ ತಲೆಕೆಡಿಸಿಕೊಳ್ಳಬೇಡಿ ವಾರದಲ್ಲಿ ಹುದ್ದೆ ನೀಡುತ್ತೇನೆ ಅಂದಿದ್ದರಂತೆ. ಹೀಗೆ ಹೇಳಿ ಮತ್ತೆ ಒಂದು ತಿಂಗಳಾಯ್ತು, ಹುದ್ದೆಯೂ ಇಲ್ಲ, ಸಂಬಳವೂ ಇಲ್ಲ ಅನ್ನೋದು ಆಯ್ಕೆಗೊಂಡ ಅಭ್ಯರ್ಥಿಗಳ ಅಳಲು.
Advertisement
ಸಚಿವೆ ಶಶಿಕಲಾ ಜೊಲ್ಲೆ ಅವರ ನಡೆ ಹಲವು ಅನುಮಾನ ಎಡೆಮಾಡಿಕೊಟ್ಟಿದ್ದು, ಭ್ರಷ್ಟಾಚಾರದ ವಾಸನೆ ಬಡಿಯುವಂತೆ ಮಾಡಿದೆ. ತಮಗೆ ಅನುಕೂಲವಾದ ಸ್ಥಳ ಪಡೆದುಕೊಳ್ಳಲು ಸಚಿವರ ಆಪ್ತರ ಮೂಲಕ ಅಭ್ಯರ್ಥಿಗಳು ಒತ್ತಡ ಹಾಕಲು ಆರಂಭಿಸಿದ್ದಾರೆ. ಸಹಜವಾಗಿ ಇದು ಭ್ರಷ್ಟಾಚಾರಕ್ಕೆ ಕಾರಣವಾಗುವುದರಲ್ಲಿ ಅನುಮಾನವಿಲ್ಲ. ಅಂಗನವಾಡಿಗಳಲ್ಲಿ ಸರಿಯಾಗಿ ಕೆಲಸ ಆಗ್ತಾ ಇಲ್ಲ, ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಾ ಇಲ್ಲ ಎಂಬುದನ್ನು ನೋಡಿಕೊಂಡು ಜಾರಿಗೆ ತರಲು ಇರುವ ಈ ಹುದ್ದೆಗಳ ನೀಡುವಿಕೆಯಲ್ಲಿ ಭ್ರಷ್ಟಾಚಾರ ನಡೆದರೆ, ಬಡವರ ಕಲ್ಯಾಣಕ್ಕಾಗಿ ಇರುವ ಈ ಯೋಜನೆಗಳು ಹಳ್ಳ ಹಿಡಿಯುವುದರಲ್ಲಿ ಅನುಮಾನವಿಲ್ಲ. ಈ ಪ್ರಕ್ರಿಯೆ ಹಾದಿ ತಪ್ಪುವುದಕ್ಕಿಂದ ಮೊದಲು, ತಮ್ಮ ಮೇಲೆ ಬರಬಹುದಾದ ಆಪಾದನೆ ಮತ್ತು ಅನುಮಾನದಿಂದ ಮುಕ್ತರಾಗಲು ಸಚಿವೆ ಶಶಿಕಲಾ ಜೊಲ್ಲೆ ಏನು ಮಾಡ್ತಾರೆ ಅನ್ನೋದು ಕುತೂಹಲ. ಪ್ರಕ್ರಿಯೆ ವಿಳಂಬ ಯಾಕೆ ಎನ್ನುವುದಕ್ಕೆ ಸಚಿವರ ಬಳಿ ಉತ್ತರವಿಲ್ಲ.
519 ಮೇಲ್ವಿಚಾರಕಿಯರಿಗೆ ಹುದ್ದೆ ನೀಡುವ ಈ ಪ್ರಕ್ರಿಯೆ ಹಾದಿತಪ್ಪುತ್ತಿದೆ ಎಂದು ಆಡಳಿತಸೌಧದಲ್ಲಿ ಸುದ್ದಿ ಹರಿದಾಡುತ್ತಿರುವುದಂತೂ ಸತ್ಯ. ಬಿಜೆಪಿ ವರಿಷ್ಠರು ಮತ್ತು ಸಿಎಂ ಯಡಿಯೂರಪ್ಪ ಸರ್ಕಾರಕ್ಕೆ ತಟ್ಟುವ ಕಳಂಕವನ್ನು ತಪ್ಪಿಸುವ ಕೆಲಸ ಮಾಡ್ತಾರಾ ಅನ್ನೋದನ್ನು ಕಾದು ನೋಡಬೇಕು.