ಚಿತ್ರದುರ್ಗ: ಅತ್ಯಾಚಾರ ಆರೋಪ ಪ್ರಕರಣವೊಂದು ರಾಜಕೀಯ ಸ್ವರೂಪ ಪಡೆದು ಹಿಂಸೆಗೆ ತಿರುಗಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನಡೆದಿದೆ.
ಅಪ್ರಾಪ್ತ ಆರೋಪಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ಕಾಂಗ್ರೆಸ್ ನಾಯಕಿ ಮುನಿರಾ ಎಂಬವರು ಪೊಲೀಸರ ಮೇಲೆ ಕಲ್ಲು ತೂರುವಂತೆ ಪ್ರತಿಭಟನಾಗಾರರಿಗೆ ಪ್ರಚೋದಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 200ಕ್ಕೂ ಹೆಚ್ಚು ಯುವಕರು ಪೊಲೀಸರ ಮೇಲೆ ಕಲ್ಲೂ ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಆಗ ಇನ್ನಷ್ಟು ಆಕ್ರೋಶಗೊಂಡ ಯುವಕರು, ಸರ್ಕಾರಿ ಬಸ್, ಆಂಬ್ಯುಲನ್ಸ್, ಪೊಲೀಸರ ವಾಹನ, ಬೈಕ್‍ಗಳ ಮೇಲೆ ಕಲ್ಲುಗಳನ್ನು ತೂರಿದ್ದಾರೆ.
ಪ್ರಚೋದನೆ ನೀಡಿದ್ದ ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಮುನಿರಾ ಸೇರಿದಂತೆ 150ಕ್ಕೂ ಹೆಚ್ಚು ಜನರನ್ನ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.