ಬೆಂಗಳೂರು: ಸಚಿವ ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರಿಗೆ ಖಾತೆ ಹಂಚಿಕೆ ಸದ್ಯಕ್ಕಿಲ್ಲ. ನಿರೀಕ್ಷೆಯಂತೆ ಖಾತೆ ಹಂಚಿಕೆ ಪ್ರಕ್ರಿಯೆಯನ್ನು ಸಿಎಂ ಯಡಿಯೂರಪ್ಪ ಮತ್ತೆ ಮುಂದೂಡಿದ್ದಾರೆ. ಖಾತೆ ಕಗ್ಗಂಟು ಇನ್ನೂ ಬಗೆಹರಿಯದ ಹಿನ್ನೆಲೆಯಲ್ಲಿ ಸೋಮವಾರ ಅಥವಾ ಸೋಮವಾರದ ಬಳಿಕ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ.
ಅಷ್ಟಕ್ಕೂ ಇಂದೇ ಖಾತೆ ಹಂಚಿಕೆ ಪ್ರಕ್ರಿಯೆ ನಡೆಸುವುದಾಗಿ ಸಿಎಂ ಯಡಿಯೂರಪ್ಪ ಹೇಳಿದ್ದರು. ಸಂಪುಟ ವಿಸ್ತರಣೆಯಾದ ದಿನ ಹಾಗೂ ನಿನ್ನೆ ಬೀದರ್‍ನಲ್ಲಿ ಶನಿವಾರದೊಳಗೆ ಖಾತೆ ಹಂಚುವುದಾಗಿ ಸಿಎಂ ಹೇಳಿಕೆ ಕೊಟ್ಟಿದ್ದರು. ಆದರೆ ನಿರ್ದಿಷ್ಟ ಖಾತೆಗಳಿಗೆ ಮಿತ್ರಮಂಡಳಿ ಸಚಿವರು ಪಟ್ಟು ಮುಂದುವರಿಸಿದ್ದೇ ಇಂದು ಖಾತೆ ಹಂಚಿಕೆಗೆ ಬ್ರೇಕ್ ಬೀಳಲು ಕಾರಣ ಎನ್ನಲಾಗಿದೆ. ಎಲ್ಲವೂ ಸರಿಹೋಗಿದ್ದಿದ್ರೆ ಇಂದು ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ ರಾಜ್ಯಪಾಲರ ಬಳಿ ಅನುಮತಿಗಾಗಿ ಸರ್ಕಾರ ಕಳಿಸಬೇಕಿತ್ತು. ಆದರೆ ಕಗ್ಗಂಟು ಹಿನ್ನೆಲೆಯಲ್ಲಿ ಇನ್ನೂ ಖಾತೆ ಹಂಚಿಕೆ ಮಾಡಲಾಗಿಲ್ಲ ಎಂದು ಹೇಳಲಾಗಿದೆ.
Advertisement
Advertisement
ಮಿತ್ರಮಂಡಳಿ ಸಚಿವರು ಕೆಲವು ನಿರ್ದಿಷ್ಟ ಖಾತೆಗಳೇ ಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಜಲಸಂಪನ್ಮೂಲ ಖಾತೆ, ಗೃಹ ಖಾತೆ, ಕಂದಾಯ ಖಾತೆ, ಸಮಾಜ ಕಲ್ಯಾಣ ಖಾತೆ, ವೈದ್ಯಕೀಯ ಶಿಕ್ಷಣ ಇಲಾಖೆ, ಬೆಂಗಳೂರು ಅಭಿವೃದ್ಧಿ ಇಲಾಖೆ ಸೇರಿ ಹಲವು ಖಾತೆಗಳೇ ಬೇಕು ಅಂತಿದ್ದಾರಂತೆ. ರಮೇಶ್ ಜಾರಕಿಹೊಳಿಯವರು ಜಲಸಂಪನ್ಮೂಲ ಖಾತೆಗೆ ಪಟ್ಟು ಹಿಡಿದಿರುವುದೂ ಗೊಂದಲಕ್ಕೆ ಮುಖ್ಯ ಕಾರಣವೆನ್ನಲಾಗಿದೆ. ಮೂಲಗಳ ಪ್ರಕಾರ ರಮೇಶ್ ಜಾರಕಿಹೊಳಿವರಿಗೆ ಜಲಸಂಪನ್ಮೂಲ ಇಲಾಖೆಗೆ ಹೈಕಮಾಂಡ್ ಒಲವು ತೋರಿಲ್ಲ. ಈ ಮೂಲಕ ಸಿಎಂ ಯಡಿಯೂರಪ್ಪರವರ ಮನವೊಲಿಕೆ ಕಸರತ್ತು ಕೈ ಹಿಡಿದಿಲ್ಲ ಎನ್ನಲಾಗಿದೆ. ಶುಕ್ರವಾರವೂ ರಾತ್ರಿ ಸಿಎಂ ಯಡಿಯೂರಪ್ಪ ರಮೇಶ್ ಜಾರಕಿಹೊಳಿಯವರನ್ನು ತಮ್ಮ ನಿವಾಸಕ್ಕೆ ಕರೆಸಿ ಮಾತುಕತೆ ನಡೆಸಿದ್ದರೂ ಪ್ರಯೋಜನವಾಗಿಲ್ಲ ಎಂದು ಹೇಳಲಾಗಿದೆ.
Advertisement
Advertisement
ಪಕ್ಷದ ಮೂಲ ಸಚಿವರಿಗೂ ಕೆಲ ಖಾತೆಗಳನ್ನು ಮಿತ್ರಮಂಡಳಿಗೆ ಬಿಟ್ಟುಕೊಡುವಂತೆಯೂ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ ಎನ್ನಲಾಗಿದೆ. ಇದು ಕೂಡ ಗೊಂದಲಕ್ಕೆ ಕಾರಣವಾಗಿದೆ. ಪಕ್ಷದ ಮೂಲ ಸಚಿವರು ಪ್ರಭಾವಿ ಖಾತೆಗಳನ್ನು ಬಿಟ್ಟುಕೊಡಲು ಹಿಂಜರಿಯುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.