ಮಂಗಳೂರು: ಇಲ್ಲಿನ ವಿಶ್ವವಿದ್ಯಾನಿಲಯದ ಪಠ್ಯದಲ್ಲಿ ಮತ್ತೊಂದು ಎಡವಟ್ಟು ಕಂಡುಬಂದಿದೆ. ದ್ವಿತೀಯ ಬಿಕಾಂ ಪದವಿ ವಿದ್ಯಾರ್ಥಿಗಳ ಕನ್ನಡ ಪಠ್ಯದಲ್ಲಿ ಅಶ್ಲೀಲತೆಯನ್ನು ಬಿಂಬಿಸುವ ಕಥೆಯೊಂದನ್ನು ಪಠ್ಯವಾಗಿ ನೀಡಿದ್ದು ಈಗ ಆಕ್ಷೇಪಕ್ಕೆ ಕಾರಣವಾಗಿದೆ.
ನುಡಿ ನೂಪುರ ಎಂಬ ಪುಸ್ತಕದಲ್ಲಿ ಮಗುವಿನ ತಂದೆ ಹೆಸರಿನ ಪಠ್ಯ ಅಳವಡಿಸಲಾಗಿದೆ. ಇದರಲ್ಲಿ ಗಂಡ ಹೆಂಡತಿಯ ಸಂಬಂಧವನ್ನು ಹೊರತುಪಡಿಸಿ ಅಕ್ರಮ ಸಂಬಂಧ ಸರಿ ಅನ್ನುವಂತೆ ಬಿಂಬಿಸುವ ಕಥೆಯನ್ನು ಪಠ್ಯವಾಗಿ ಸೇರಿಸಲಾಗಿದೆ. ಅಲ್ಲದೆ, ವಿವಾಹೇತರ ಸಂಬಂಧವನ್ನು ಲಘು ಭಾಷೆಯಲ್ಲಿ ವಿವರಿಸಲಾಗಿದ್ದು, ಸ್ವತಃ ಇದನ್ನು ಬೋಧನೆ ಮಾಡುವ ಶಿಕ್ಷಕ ವೃಂದಕ್ಕೆ ಮುಜುಗರ ಸೃಷ್ಟಿಸುವಂತಿದೆ.
ಮಟ್ಟಾರು ವಿಠಲ ಹೆಗ್ಡೆ ಎಂಬ ಕಥೆಗಾರ 1939ರಲ್ಲಿ ಬರೆದ ಈ ಕಥೆಯನ್ನು ಈಗ ಪಠ್ಯವಾಗಿ ಸೇರಿಸಿಕೊಂಡಿದ್ದರ ಉದ್ದೇಶವೇನು ಅನ್ನೋ ಪ್ರಶ್ನೆಯನ್ನು ಉಪನ್ಯಾಸಕರು ಮುಂದಿಟ್ಟಿದ್ದಾರೆ. ವಿದ್ಯಾರ್ಥಿಗಳಲ್ಲಿ ವಿವಾಹೇತರ ಸಂಬಂಧದ ಚಿತ್ರಣ ತಿಳಿಸಿ, ಯಾವ ರೀತಿಯ ವಿಕೃತಿಯನ್ನು ಹೇರುತ್ತಿದ್ದಾರೆಂದು ಪ್ರಶ್ನಿಸಿದ್ದಾರೆ. ವಿವಿಯ ಪಠ್ಯ ಈಗಷ್ಟೆ ಮುದ್ರಣ ಆಗಿ ವಿದ್ಯಾರ್ಥಿಗಳ ಕೈಸೇರಿದ್ದು ಕೂಡಲೇ ಅದನ್ನು ಹಿಂಪಡೆಯಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಈ ಮೂಲಕ ಪಠ್ಯ ಪುಸ್ತಕ ರಚನಾ ಸಮಿತಿ ಯಾವ ರೀತಿಯ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುತ್ತಿದೆ ಎಂಬ ಪ್ರಶ್ನೆಯೂ ಕೇಳಿಬಂದಿದೆ.