Connect with us

Cinema

ಮೈಸೂರಿನಲ್ಲಿ ಗಾಯನ ನಿಲ್ಲಿಸಲಿದ್ದಾರೆ ಗಾನ ಕೋಗಿಲೆ ಎಸ್.ಜಾನಕಿ!

Published

on

ಮೈಸೂರು: ಗಾನ ಕೋಗಿಲೆ ಎಂದೆ ಪ್ರಸಿದ್ಧಿ ಪಡೆದಿರುವ ಖ್ಯಾತ ಗಾಯಕಿ ಎಸ್. ಜಾನಕಿ ಅವರು ತಮ್ಮ ಗಾಯನ ಪಯಣದಿಂದ ಹಿಂದೆ ಸರಿಯಲು ನಿರ್ಧಾರ ಮಾಡಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಅಕ್ಟೋಬರ್ 28 ರಂದು ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಜೀವನದ ನಿರಂತರ ಆರು ದಶಕದ ಸಂಗೀತ ಗಾಯನದ ಪಯಣದ ಕೊನೆಯ ಕಾರ್ಯಕ್ರಮ ಎಂದು ತಿಳಿಸಿದ್ದಾರೆ.

ದಕ್ಷಿಣ ಭಾರತದ ಹೆಮ್ಮೆಯ ಗಾಯಕಿ ಎಂದೆ ಹೆಗ್ಗಳಿಕೆಯನ್ನು ಪಡೆದಿರುವ ಎಸ್.ಜಾನಕಿ ಅವರು, “ನನಗೆ ವಯಸ್ಸಾಗಿದೆ. ಇನ್ನು ಮುಂದೆ ನಾನು ಹಾಡುವುದಿಲ್ಲ. ಆದ್ದರಿಂದ ಗಾಯನದಿಂದ ಹಿಂದೆ ಸರಿಯುತ್ತಿದ್ದೇನೆ. ಈ ವಯಸ್ಸಿನಲ್ಲಿ ಹಾಡುವುದನ್ನು ನಿಲ್ಲಿಸುವುದೇ ಸರಿ ಎನಿಸಿದೆ. ಆದ್ದರಿಂದ ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮವೇ ನನ್ನ ಕೊನೆಯ ಬಹಿರಂಗ ಗಾಯನ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮ ಮುಗಿದ ನಂತರ ನಾನು ಇನ್ನು ಮುಂದೆ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಹಾಗೂ ಟಿವಿ, ಪತ್ರಿಕೆಗಳಿಗೆ ಸಂದರ್ಶನವನ್ನು ನೀಡುವುದಿಲ್ಲ” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಎಸ್ ಜಾನಕಿ ಅವರಿಗೆ ಈಗ ಸುಮಾರು 80 ವರ್ಷ ವಯಸ್ಸಾಗಿದ್ದು, ಸುಮಾರು 17 ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ನಾಲ್ಕು ಬಾರಿ ತಮ್ಮ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಇವರು 1952ರಲ್ಲಿ ಅಂದಿನ ಪ್ರಖ್ಯಾತ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರಿಂದ ಆಯೋಜಿಸಲ್ಪಟ್ಟಿದ್ದ ಸಂಗೀತ ಸಂಜೆಯಲ್ಲಿ ಪಿ. ಬಿ. ಶ್ರೀನಿವಾಸ್ ಜೊತೆಗೆ ಹಾಡಿದ್ದರು. ಹೀಗಾಗಿ ಜಾನಕಿ ಅವರು ತಮ್ಮ ಸಂಗೀತ ಪಯಣವನ್ನು ಪ್ರಥಮ ಬಾರಿಗೆ ಮಹಾನಗರಿಯಲ್ಲಿಯೇ ಆರಂಭಿಸಿದ್ದರು. ಇದೀಗ ಅವರ ಕೊನೆಯ ಗಾಯನ ಕೂಡ ಇಲ್ಲಿಯೇ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ತಮಿಳುನಾಡು, ಆಂಧ್ರ ಮತ್ತು ಕೇರಳದಿಂದಲೂ ಅನೇಕ ಅಭಿಮಾನಿಗಳು ಬರುವ ನಿರೀಕ್ಷೆ ಇದೆ. ಈ ಬಾರಿ ರಾಜಮಾತೆ ಪ್ರಮೋದಾದೇವಿ ಅವರಿಂದ ಸನ್ಮಾನವನ್ನು ಸ್ವೀಕರಿಸಲಿದ್ದಾರೆ ಎಂದು ಅಂದಿನ ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.

 

https://www.youtube.com/watch?v=u7hM79uZF_U

Click to comment

Leave a Reply

Your email address will not be published. Required fields are marked *