ಕಾರವಾರ: ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್ ನಿಲ್ದಾಣ (Bustand in Karwar) ನಿರ್ಮಿಸಿ ಸೆಡ್ಡು ಹೊಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಹೌದು. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ 10 ವರ್ಷದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚತುಷ್ಪತ ಹೆದ್ದಾರಿ ಕಾಮಗಾರಿಯನ್ನು ಐ.ಆರ್.ಬಿ ಕಂಪನಿ ಮೂಲಕ ನೆಡೆಸುತ್ತಿದೆ. ಈವರೆಗೂ ಕಾಮಗಾರಿ ಪೂರ್ಣಗೊಳ್ಳದೇ ಜಮೀನು ಕಳೆದುಕೊಂಡವರು ಕೋರ್ಟ್ ಸುತ್ತುತಿದ್ದಾರೆ. ಇತ್ತ ಕಾಮಗಾರಿಗಾಗಿ ಚತುಷ್ಪತ ಹೆದ್ದಾರಿ ಹಾದು ಹೋಗುವ ಭಾಗದಲ್ಲಿ ಪ್ರಯಾಣಿಕರಿಗಾಗಿ ನಿರ್ಮಿಸಿದ್ದ ಬಸ್ ನಿಲ್ದಾಣ ಕೆಡವಿಹಾಕಿರುವ ಐ.ಆರ್.ಬಿ ಕಂಪನಿ, ನಿಯಮದಂತೆ ಬಸ್ ನಿಲ್ದಾಣ ನಿರ್ಮಿಸಿಕೊಡಲು ಮೀನಾಮೇಷ ತೋರುತ್ತಿದೆ. ಇದರಿಂದಾಗಿ ಕರಾವಳಿ ಭಾಗದ ಹಲವು ಗ್ರಾಮದ ಜನ ಬಸ್ ನಿಲ್ದಾಣವಿಲ್ಲದೇ ಹಿಡಿ ಶಾಪ ಹಾಕುವಂತಾಗಿದೆ.
10 ವರ್ಷದಿಂದ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅಂಕೋಲ ತಾಲೂಕಿನ ಹಾರವಾಡದ ಜನತೆ ಕೆಡವಿದ ಬಸ್ ನಿಲ್ದಾಣವನ್ನು ನಿರ್ಮಿಸಿಕೊಡುವಂತೆ ಮನವಿಯ ಮೇಲೆ ಮನವಿ ನೀಡಿದರೂ ಬಸ್ ನಿಲ್ದಾಣ ಮಾತ್ರ ನಿರ್ಮಾಣ ಆಗಲಿಲ್ಲ. ಇನ್ನು ಹೆದ್ದಾರಿಯಲ್ಲಿ ಪ್ರತಿ ದಿನ ಶಾಲಾ- ಕಾಲೇಜು ಹಾಗೂ ಉದ್ಯೋಗಕ್ಕಾಗಿ ಅಂಕೋಲ, ಕಾರವಾರಕ್ಕೆ ಹೋಗುವ ಪ್ರಯಾಣಿಕರಿಗೆ ಹಾರವಾಡ ಕ್ರಾಸ್ ನಲ್ಲಿ ನಿಲ್ದಾಣ ಇರದ ಕಾರಣ ಬರುವ ಬಸ್ ನನ್ನು ಸಹ ನಿಲ್ಲಿಸುವುದಿಲ್ಲ. ಇದನ್ನೂ ಓದಿ: KEA ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ವರ್ಗಾವಣೆ – CET ಪ್ರಶ್ನೆ ಪತ್ರಿಕೆ ಗೊಂದಲ ಕಾರಣ ಎತ್ತಂಗಡಿ?
ಪ್ರತಿ ದಿನ ಬಿಸಿಲ ಹೊಡತಕ್ಕೆ ನೆತ್ತಿ ಸುಟ್ಟು, ಗಂಟೆಗಟ್ಟಲೇ ಕಾಯುವ ಮಹಿಳೆಯರು ಆಡಳಿತದ ನಿರ್ಲಕ್ಷಕ್ಕೆ ಬೇಸತ್ತು ತಮ್ಮ ಊರಿನಲ್ಲಿ ಸಿಗುವ ತೆಂಗಿನಗರಿಯನ್ನು ಒಟ್ಟುಮಾಡಿ ನಿಲ್ದಾಣ ನಿರ್ಮಿಸಿದ್ದಾರೆ. ಈ ನಿಲ್ದಾಣಕ್ಕೆ ತಾವೇ ಕೈಯಿಂದ ಬರೆದ ಹಾರವಾಡ ಬಸ್ ನಿಲ್ದಾಣ ಬೋರ್ಡ್ ಸಹ ಹಾಕುವ ಮೂಲಕ ಆಡಳಿತ ಮಾಡಬೇಕಿದ್ದ ಕೆಲಸವನ್ನು ಈ ಊರಿನ ಬಡ ಮಹಿಳೆಯರು ಮಾಡಿ ತೋರಿಸಿದ್ದಾರೆ. ಈ ಮೂಲಕ ಆಡಳಿತವರ್ಗಕ್ಕೆ ಛಾಟಿ ಬೀಸಿದ್ದಾರೆ.
ಸದ್ಯ ಈ ಊರಿನವರಿಗೆ ಬಿಸಿಲ ಹೊಡೆತಕ್ಕೆ ತೆಂಗಿನಗರಿಯ ನೆರಳೇನೋ ಸಿಕ್ಕಿದೆ. ಆದರೆ ಬರುವ ಮಳೆಯಲ್ಲಿ ಈ ತಾತ್ಕಾಲಿಕ ನಿಲ್ದಾಣ ಬಿದ್ದು ಹೋಗಲಿದ್ದು ಇನ್ನಾದರೂ ಆಡಳಿತ ವರ್ಗ ಈ ಬಗ್ಗೆ ಗಮನ ನೀಡಿ, ನಿಯಮದಂತೆ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಹಳ್ಳಿ ಜನ ಒತ್ತಾಯಿಸಿದ್ದಾರೆ.
ಸದ್ಯ ಈ ಊರಿನಲ್ಲಿ 100 ಕ್ಕೂ ಹೆಚ್ಚು ಮನೆಗಳಿವೆ. ಬಹುತೇಕ ಜನರು ನೌಕಾನೆಲೆಗೆ ಜಾಗ ನೀಡಿ ನಿರಾಶ್ರಿತರಾಗಿದ್ದಾರೆ. ಹೀಗಿದ್ದರೂ ಆಡಳಿತ ವರ್ಗ ಮಾತ್ರ ಇವರ ಮನವಿಗೆ ಸ್ಪಂದಿಸದೇ ಇರುವುದು ದುರಂತ. ಇನ್ನಾದರೂ ಹೆದ್ದಾರಿ ಪ್ರಾಧಿಕಾರ,ಐ.ಆರ್.ಬಿ ಕಂಪನಿ ಜೊತೆ ಜಿಲ್ಲಾಡಳಿತ ಇತ್ತ ಗಮನಿಸಿ ಹೊಸ ನಿಲ್ದಾಣ ನಿರ್ಮಿಸಿಕೊಡಬೇಕಿದೆ.