ಕಲಬುರಗಿ: ನಗರದ ಹೊರವಲಯ ತಾಜಸುಲ್ತಾನಪುರ ಕೆಎಸ್‍ಆರ್‍ಪಿ ಪೊಲೀಸ್ ವಸತಿ ನಿಲಯಗಳು ಸಂಪೂರ್ಣ ಶಿಥಿಲಗೊಂಡಿವೆ. ಇಂತಹ ಮನೆಗಳಲ್ಲಿ ಆತಂಕದ ನಡುವೆಯೇ ಪೊಲೀಸ್ ಪೇದೆಗಳು ದಿನಗಳೆಯುವಂತಾಗಿದೆ.
ಸರ್ಕಾರ ಪ್ರತಿ ವರ್ಷ ನೂರಾರು ಕೋಟಿ ರೂ.ಗಳನ್ನು ಇತರೆ ಕಾಮಗಾರಿಗಳಿಗೆ ಖರ್ಚು ಮಾಡುತ್ತಿದೆ. ಇದರಲ್ಲಿ ಸ್ವಲ್ಪ ಹಣ ಮೀಸಲಿಟ್ಟರೆ ನೂತನ ಕಟ್ಟಡ ಪೊಲೀಸರಿಗೆ ಒದಗಿಸಬಹುದು. ಆದರೆ ಸರ್ಕಾರ ಇದಕ್ಕೆ ಮನಸ್ಸು ಮಾಡದ ಕಾರಣ ಸುಮಾರು 40 ರಿಂದ 50 ವರ್ಷಗಳ ಹಳೆಯದಾದ ಕಟ್ಟಡಗಳಲ್ಲಿ ಪೊಲೀಸರ ಕುಟುಂಬಗಳು ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ವಾಸಿಸುವಂತಾಗಿದೆ.
ಸಮಾಜದ ಸುರಕ್ಷತೆಗೆ ದುಡಿಯುವ ಪೊಲೀಸರ ಕುಟುಂಬಗಳು ಈ ಬಗ್ಗೆ ಹಲವು ಬಾರಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಹಳೆಯ ಕಟ್ಟಡ ನೆಲಸಮಗೊಳಿಸಿ ನೂತನ ಕಟ್ಟಡ ನಿರ್ಮಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಜೈ ಕರವೇ ಎಚ್ಚರಿಸಿದೆ.