ಮಂಗಳೂರು: ಇಂದು ಚಂದ್ರಗ್ರಹಣ ಇರುವ ಹಿನ್ನೆಲೆಯಲ್ಲಿ ಕರಾವಳಿಯ ಪುಣ್ಯಕ್ಷೇತ್ರಗಳಲ್ಲಿ ಪೂಜಾ ಸಮಯ ಬದಲಾಗಿದೆ.
ಚಂದ್ರಗ್ರಹಣ ಇರುವ ಕಾರಣ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಾತ್ರಿ ಪೂಜೆ 6.30ಕ್ಕೆ ಮುಕ್ತಾಯವಾಗಲಿದೆ. ಅಲ್ಲದೆ ಸಂಜೆ ನಡೆಯುವ ಆಶ್ಲೇಷ ಬಲಿ ಸೇವೆ ಕೂಡ ರದ್ದು ಮಾಡಲಾಗಿದೆ. ಧರ್ಮಸ್ಥಳದಲ್ಲೂ ಕೂಡ ಪೂಜೆ ಹಾಗೂ ಅನ್ನ ಸಂತರ್ಪಣೆ ರಾತ್ರಿ 8.30ಕ್ಕೆ ಮುಕ್ತಾಯವಾಗಲಿದೆ.
ಇತ್ತ ಕಟೀಲು ದೇವಸ್ಥಾನದಲ್ಲಿ ರಾತ್ರಿ ಯಾವುದೇ ವಿಶೇಷ ಪೂಜೆ ಇರುವುದಿಲ್ಲ. ನಿಗದಿತ ಹೂವಿನ ಪೂಜೆ ಹಾಗೂ ರಂಗಪೂಜೆ ಸೇವೆಗಳೂ ರದ್ದಾಗಿದೆ. ಕಟೀಲು ದೇಗುಲದಲ್ಲಿ ರಾತ್ರಿ ಊಟದ ವ್ಯವಸ್ಥೆಯೂ ಇರುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.
ಈ ವರ್ಷದ ಕೊನೆಯ ಚಂದ್ರಗ್ರಹಣ ಇಂದು ಸಂಭವಿಸಲಿದೆ. ಈ ವರ್ಷದ 2ನೇ ಚಂದ್ರಗ್ರಹಣ ಇದಾಗಿದ್ದು, ದಕ್ಷಿಣ ಏಷ್ಯಾ, ದಕ್ಷಿಣ ಅಮೆರಿಕ, ಆಫ್ರಿಕಾ, ಯೂರೋಪ್, ಆಸ್ಟ್ರೇಲಿಯಾದಲ್ಲಿ ಗೋಚರವಾಗುವುದು. ಒಟ್ಟು 2 ಗಂಟೆ 58 ನಿಮಿಷಗಳ ಕಾಲ ಸಂಭವಿಸುವ ಗ್ರಹಣದ ಸಮಯದಲ್ಲಿ ಚಂದ್ರನ ಕಾಂತಿಯಲ್ಲಿ ಶೇ.65 ವ್ಯತ್ಯಾಸ ಗೋಚರವಾಗಲಿದೆ.
ಇದೇ ವರ್ಷದ ಜನವರಿ 6 ರಂದು ಸಂಪೂರ್ಣ ಚಂದ್ರಗಹಣ ಸಂಭವಿಸಿತ್ತು. ಈ ಗ್ರಹಣದಿಂದ ಯಾವುದೇ ಪ್ರಾಕೃತಿಕ ವಿಕೋಪಗಳು ಆಗುವುದಿಲ್ಲ. ಗ್ರಹಣದಿಂದ ಯಾವುದೇ ನೈಸರ್ಗಿಕ ಬದಲಾವಣೆಗಳು ಜರುಗುವುದಿಲ್ಲ. ಇದು ಆಕಾಶದಲ್ಲಿ ನಡೆಯುವ ನೈಸರ್ಗಿಕ ಕ್ರಿಯೆ ಎಂದು ಖಗೋಳಶಾಸ್ತ್ರಜ್ಞ ಸುಬ್ರಮಣ್ಯ ಹೇಳಿದ್ದಾರೆ.
ಗ್ರಹಣದ ಸಮಯ
ಸ್ಪರ್ಶಕಾಲ : ರಾತ್ರಿ 1.30 ಕ್ಕೆ.
ಮಧ್ಯಕಾಲ : ರಾತ್ರಿ 3.00 ಕ್ಕೆ
ಮೋಕ್ಷಕಾಲ : ರಾತ್ರಿ 4.30 ಕ್ಕೆ