ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಗೋಕರ್ಣದ ಮಹಾಬಲೆಶ್ವರ ದೇವಸ್ಥಾನದಲ್ಲಿ ಟಿಪ್ಪುವಿನ ಹೆಸರಲ್ಲಿ ನಿತ್ಯ ಪೂಜೆ ನಡೆಸಲಾಗುತ್ತದೆ.
ಸುಮಾರು 300 ವರ್ಷಗಳಿಂದ ಗೋಕರ್ಣದ ಮಹಾಬಲೇಶ್ವರ, ಪಾರ್ವತಿ ದೇವಿ ಮತ್ತು ತಾಮ್ರ ಗೌರಿ ಮಂದಿರದಲ್ಲಿ ರಾತ್ರಿ ವೇಳೆ ಟಿಪ್ಪು ಹೆಸರಿನಲ್ಲಿ ಸಲಾಂ ಪೂಜೆ ಸಲ್ಲಿಸಲಾಗುತ್ತೆ. ಈ ಪೂಜೆಯು ಹಿಂದೂಪರ ಮಂತ್ರೋಚ್ಛಾರಣೆಯಲ್ಲಿ ನೆಡೆದ್ರೂ, ಪೂಜೆಯ ಪೂರ್ವದಲ್ಲಿ ಮೂರು ಬಾರಿ ಸಲಾಂ ಎಂದು ಉದ್ಘೋಷ ಮಾಡಲಾಗುತ್ತದೆ.
ಮಹಾಬಲೇಶ್ವರ ದೇವಸ್ಥಾನದ ದ್ವಾರದಲ್ಲಿ ಸಲಾಂ.. ಸಲಾಂ.. ಎಂದು ಕೂಗಿ ಟಿಪ್ಪುವನ್ನು ಸ್ಮರಿಸಿ ನಂತರವೇ ಆತ್ಮಲಿಂಗಕ್ಕೆ ಪೂಜೆ ಕೈಗೊಳ್ಳತ್ತಾ ಬಂದಿದ್ದಾರೆ. ಟಿಪ್ಪುವಿನ ಆಳ್ವಿಕೆಯ ಕಾಲದಲ್ಲಿ ಗೋಕರ್ಣಕ್ಕೆ ಆತನ ಸೈನಿಕರು ಮುತ್ತಿಗೆ ಹಾಕಿ ದೇವಸ್ಥಾನವನ್ನು ವಶಪಡಿಸಿಕೊಳ್ಳಲು ಹೊರಟಿದ್ದ ಸಂದರ್ಭದಲ್ಲಿ ಟಿಪ್ಪುವಿಗೆ ಶಿವನು ಕನಸಿನಲ್ಲಿ ಬಂದಿದ್ದನಂತೆ. ಇದರಿಂದ ಭಯಗೊಂಡ ಟಿಪ್ಪು ದೇವಸ್ಥಾನಕ್ಕೆ ಬಂದು ಕ್ಷಮೆ ಯಾಚಿಸಿ ಸಲಾಂ ವಂದನೆ ನೀಡಿ ಕಪ್ಪಕಾಣಿಕೆ ಅರ್ಪಣೆ ಮಾಡಿದ್ದನಂತೆ. ಹೀಗಾಗಿ ಆತ ಬಂದು ಕ್ಷಮೆ ಕೇಳಿದ ಹೊತ್ತನ್ನು ಹಾಗೂ ಆತ ಸಲಾಂ ಹೇಳಿದ ಶಬ್ದವನ್ನು ಇಲ್ಲಿ ಬಳಸಿ ಆತನನ್ನು ಸ್ಮರಿಸಲಾಗುತ್ತಿದೆ ಎನ್ನಲಾಗಿದೆ.