ಚಿಕ್ಕಬಳ್ಳಾಪುರ: ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತಾಗಿದೆ ಆ ರೈತನ (Farmers) ಪರಿಸ್ಥತಿ, ಸಾಲ ಸೋಲ ಮಾಡಿ ದಾಳಿಂಬೆ ಬೆಳೆದಿದ್ದರು. ಇನ್ನೇನು ಉತ್ತಮ ಫಸಲು ಬರ್ತಿದೆ ಸಾಲ ತೀರಿಸಿಕೊಳ್ಳಬಹುದು ಅಂದುಕೊಳ್ಳುವಷ್ಟರಲ್ಲಿ ಮಳೆ-ಗಾಳಿಗೆ ಬೆಳೆದ ಬೆಳೆಯೆಲ್ಲವೂ ಹಾಳಾಗತೊಡಗಿದೆ. ಇದರಿಂದ ರೈತ ಕಂಗಾಲಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ನಡೆದಿದೆ.
ತಾಲೂಕಿನ ಕಡಶೀಗೇನಹಳ್ಳಿ ನಿವಾಸಿ, ರೈತ ಕ್ಯಾತಪ್ಪ 2 ವರ್ಷಗಳ ಹಿಂದೆ ಒಂದೂವರೆ ಎಕರೆ ತೋಟದಲ್ಲಿ ದಾಳಿಂಬೆ ಬೆಳೆದಿದ್ದರು. ಲಕ್ಷಾಂತರ ರೂಪಾಯಿ ಸಾಲ ಸೋಲ ಮಾಡಿ ದಾಳಿಂಬೆ ಬೆಳೆದಿದ್ದು ಕಳೆದ ವರ್ಷ ಉತ್ತಮ ಫಸಲು ಬಂದಿತ್ತು. ಇನ್ನೂ ಈಗ 2ನೇ ವರ್ಷ ಈ ಬಾರಿಯೂ ಉತ್ತಮ ಫಸಲು ಬರುವ ನೀರಿಕ್ಷೆಯಲ್ಲಿದ್ದರು. ಹಾಗೆಯೇ ಗಿಡಗಳ ತುಂಬೆಲ್ಲಾ ಹೂಗಳು ನಳನಳಿಸುತ್ತಿದ್ದವು. ಮೊಗ್ಗು ಅರ್ಧಂಬರ್ಧ ಕಾಯಾಗಿ ಗಿಡದ ತುಂಬೆಲ್ಲಾ ಕಾಯಿಗಳು ಬರಲಿವೆ ಅಂತ ಸಂತಸಗೊಂಡಿದ್ದರು. ಆದ್ರೆ ಕಳೆದ 2 ದಿನಗಳ ಹಿಂದೆ ಸುರಿದ ಗಾಳಿ ಮಳೆಗೆ ದಾಳಿಂಬೆ ಗಿಡಗಳಲ್ಲಿದ್ದ ಹೂಗಳೆಲ್ಲವೂ ನೆಲಕ್ಕೆ ಉದುರಿ ಮಣ್ಣು ಪಾಲಾಗಿವೆ.
ಇದರಿಂದ ರೈತ ನೊಂದುಕೊಳ್ಳುವಂತಾಗಿದೆ. ಅಂದಹಾಗೆ ಕಳೆದ ವರ್ಷ 12 ಟನ್ ಇಳುವರಿ ಬಂದಿತ್ತು. ಈ ಬಾರಿಯೂ 12-13 ಟನ್ ಇಳುವರಿ ಬರಲಿದೆ. ಒಳ್ಳೆಯ ರೇಟ್ ಸಿಕ್ರೆ ಲಕ್ಷಾಂತರ ರೂಪಾಯಿ ಆದಾಯವೂ ಬರಲಿದೆ ಅಂತ ರೈತ ಸಖತ್ ಖುಷಿಯಲ್ಲಿದ್ದ. ಆದ್ರೆ ಒಂದೇ ಒಂದು ಗಾಳಿ ಮಿಶ್ರಿತ ಮಳೆ ರೈತನ ಆಸೆಗಳನ್ನೆಲ್ಲಾ ನುಚ್ಚು ನೂರು ಮಾಡಿದೆ. ದಾಳಿಂಬೆ ಗಿಡಗಳಲ್ಲಿದ್ದ ಹೂಗಳೆಲ್ಲವೂ ಮಣ್ಣು ಪಾಲಾಗಿ ಈಗ ಕೇವಲ 3-4 ಟನ್ ಮಾತ್ರ ಇಳುವರಿ ಬಂದರೆ ಹೆಚ್ಚು ಅಂತ ರೈತ ನೋವು ತೋಡಿಕೊಂಡಿದ್ದಾರೆ.