– ಕಾರ್ಖಾನೆಗೆ ಕೂಡಲೇ ವಿದ್ಯುತ್ ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಆದೇಶ
– ಸರ್ಕಾರದ ವಿರುದ್ಧ ಶಾಸಕ ಯತ್ನಾಳ್ ಕೆಂಡಾಮಂಡಲ
ಬೆಂಗಳೂರು: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಮಾಲೀಕತ್ವದ ಕಲಬುರಗಿಯ ಸಿದ್ಧಶ್ತೀ ಸೌಹಾರ್ದ ಸಹಕಾರ ಸಕ್ಕರೆ ಕಾರ್ಖಾನೆಗೆ ನೋಟಿಸ್ ನೀಡಲಾಗಿದೆ. ಕಾಯ್ದೆ ಉಲ್ಲಂಘನೆ ಆರೋಪದ ಹಿನ್ನೆಲೆ ಮಾಲಿನ್ಯ ನಿಯಂತ್ರಣ ಮಂಡಳಿ (Pollution Control Board) ನೋಟೀಸ್ ಜಾರಿಗೊಳಿಸಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ವಿಭಾಗದ ಅಧಿಕಾರಿಗಳು ಕಾರ್ಖಾನೆಗೆ (Factory) ಭೇಟಿ ನೀಡಿದಾಗ ಅನುಮತಿ ಪಡೆಯದೇ ಬಾಯ್ಲರ್, ಡಿಸ್ಟಲರಿ ಘಟಕಗಳನ್ನು ಆರಂಭಿಸಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿರುವ ಆರೋಪದಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಅಲ್ಲದೇ ಪರಿಸರ ಮಾಲಿನ್ಯ ಉಂಟಾಗುತ್ತಿರುವ ಕಾರಣಕ್ಕಾಗಿಯೇ ಕಳೆದ ವರ್ಷ ಕೇಂದ್ರ ಪರಿಸರ ಸಚಿವಾಲಯವು ಸಕ್ಕರೆ ಕಾರ್ಖಾನೆಗೆ 1.58 ಕೋಟಿ ರೂ. ದಂಡ ವಿಧಿಸಿತ್ತು ಎಂಬುದಾಗಿಯೂ ನೋಟೀಸ್‌ನಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: 7 ಶಾಸಕರನ್ನ ಖರೀದಿಸಲು ಬಿಜೆಪಿಯಿಂದ ತಲಾ 25 ಕೋಟಿ ರೂ. ಆಫರ್ – ಕೇಜ್ರಿವಾಲ್ ಹೊಸ ಬಾಂಬ್
ಕಳೆದ ವಾರ ಪರಿಸರ ಸಚಿವ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಕೆಎಸ್‌ಪಿಸಿಬಿ ಸಭೆ ನಡೆಸಿತ್ತು. ಸಭೆಯಲ್ಲಿ ಕಾರ್ಖಾನೆ ವಿರುದ್ಧ ಸಾಕಷ್ಟು ಆರೋಪ ಕೇಳಿಬಂದಿತ್ತು. ತ್ಯಾಜ್ಯ ನೀರು ಘಟಕ ಪೂರ್ಣಗೊಳಿಸಿಲ್ಲ, ತ್ಯಾಜ್ಯ ನೀರು ಶುದ್ಧೀಕರಣ ಮಾಡುತ್ತಿಲ್ಲ, ಮಳೆ ನೀರು ಕೊಯ್ಲು ಆಳವಡಿಸಿಲ್ಲ ಎಂಬ ಆರೋಪಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿ ಕಾರ್ಖಾನೆಯ ವಿರುದ್ಧ ಕ್ರಮಕ್ಕೆ ಸೂಚಿಸಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಂತ ಎ. ತಮ್ಮಯ್ಯ ನೋಟಿಸ್ ಜಾರಿಗೊಳಿಸಿದ್ದಾರೆ.
ಕಾರ್ಖಾನೆಗೆ ಕರೆಂಟ್ ಕಟ್‌ಗೆ ಸೂಚನೆ:
ಯತ್ನಾಳ್ ಮಾಲೀಕತ್ವದ ಕಾರ್ಖಾನೆಗೆ ವಿದ್ಯುತ್ ಸ್ಥಗಿತಗೊಳಿಸುವಂತೆ ಗುಲಬರ್ಗಾ ವಿದ್ಯುತ್ ಸರಬರಾಜು ಸಂಸ್ಥೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದೆ. ತಕ್ಷಣದಿಂದಲೇ ಇಡೀ ಕಾರ್ಖಾನೆಗೆ ವಿದ್ಯುತ್ ಸ್ಥಗಿತಗೊಳಿಸುವಂತೆ ಎಂಡಿಗೆ ಸೂಚನೆ ನೀಡಿದೆ. ಇದನ್ನೂ ಓದಿ: ಎಂಜಿ ರೋಡ್- ಬೈಯಪ್ಪನಹಳ್ಳಿ ಮೆಟ್ರೋ ಸಂಚಾರದಲ್ಲಿ ತಾತ್ಕಾಲಿಕ ಸ್ಥಗಿತ- ಪ್ರಯಾಣಿಕರ ಪರದಾಟ
ಯತ್ನಾಳ್ ಎಕ್ಸ್ ಖಾತೆಯಲ್ಲಿ ಏನಿದೆ?
ನೋಟಿಸ್ ಜಾರಿಗೊಳಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಯತ್ನಾಳ್ ಕೆಂಡಾಮಂಡಲವಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜಕೀಯವಾಗಿ ಎದುರಿಸಲಾಗದೆ ನಮ್ಮ ಎಥನಾಲ್ ಕಾರ್ಖಾನೆಗೆ ನೋಟಿಸ್ ಕೊಡಿಸಿದೆ. ರೈತರಿಗೆ ನೆರವಾಗಲು ಹಾಗೂ ಹಿಂದುಳಿದ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಕಾರ್ಖಾನೆ ಸ್ಥಾಪಿಸಲಾಗಿದೆ. ಕಾನೂನು ರೀತಿಯ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಲಾಗುತ್ತದೆ. ಈ ನೋಟಿಸ್, ಆದೇಶಗಳಿಗೆ ಹೆದರುವ ಜಾಯಮಾನ ನನ್ನದಲ್ಲ ಕಾಂಗ್ರೆಸ್ ಆಡಳಿತದ ವಿರುದ್ಧ ಹೋರಾಟ ಮಾಡಲು ಶಕ್ತಿ ಇಮ್ಮಡಿಯಾಗಿದೆ.
ರಾಜಕೀಯ ಒತ್ತಡಕ್ಕೆ ಮಣಿದು ಕಾರ್ಖಾನೆ ಮುಚ್ಚಿಸಿರೋದ್ರಿಂದ ಇವರು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಕಾರ್ಖಾನೆ ತೆರೆಯುವುದು ನಿಶ್ಚಿತ. ಈ ನಿಟ್ಟಿನಲ್ಲಿ ಕಾನೂನು ಹೋರಾಟ ನಟಡಸುತ್ತೇನೆ. `ಕೈ’ಲಾಗದವರ ಕೊನೆಯ ಅಸ್ತçವೇ ಅಪಪ್ರಚಾರ ಎಂಬುದು ಗೊತ್ತಿರುವ ವಿಷಯ. ಬಡವರಿಗೆ, ದೀನ-ದಲಿತರಿಗೆ, ಪಕ್ಷದ ಕಾರ್ಯಕರ್ತರಿಗೆ ಸಹಾನೂಭೂತಿಯಿಂದ ಕಾಣುತ್ತ ಬಂದಿರುವ ನಾನು, ನನ್ನ ಮಿತಿಯಲ್ಲಿ ನನ್ನದೇ ಕಾರ್ಖಾನೆಗಳಲ್ಲಿ ನೂರಾರು ಜನರಿಗೆ ಉದ್ಯೋಗ ಸೃಷ್ಟಿಸಿದ್ದೇನೆ. ಜಿಲ್ಲೆಯ ಆರ್ಥಿಕತೆಯನ್ನು ಸುಧಾರಿಸಲು ನನ್ನ ಅಳಿಲು ಸೇವೆಯೂ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜ. 31 ರೊಳಗೆ ಇಡಿ ಮುಂದೆ ಹಾಜರಾಗಿ- ಜಾರ್ಖಂಡ್ ಸಿಎಂಗೆ ಇಡಿ 10ನೇ ಸಮನ್ಸ್