ಚೆನ್ನೈ: ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣದ (Pollachi sexual assault case) ಎಲ್ಲಾ 9 ಅಪರಾಧಿಗಳಿಗೆ ಕೊಯಮತ್ತೂರಿನ ಮಹಿಳಾ ನ್ಯಾಯಾಲಯ (Mahila Court) ಜೀವಾವಧಿ ಶಿಕ್ಷೆ (Life Imprisonment) ವಿಧಿಸಿದೆ. 6 ವರ್ಷಗಳ ಹಿಂದೆ ತಮಿಳುನಾಡನ್ನು (Tamil Nadu) ಬೆಚ್ಚಿಬೀಳಿಸಿದ್ದ ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಂದಿನಿ ದೇವಿ ಅವರಿದ್ದ ಪೀಠ ಈ ತೀರ್ಪನ್ನು ನೀಡಿದೆ.
ಅಪರಾಧಿಗಳಾದ ಕೆ. ತಿರುನಾವುಕ್ಕರಸು (34), ಎನ್. ರಿಶ್ವಂತ್, ಅಲಿಯಾಸ್ ಶಬರಿರಾಜನ್(32), ಎಂ. ಸತೀಶ್ (33), ಟಿ. ವಸಂತ ಕುಮಾರ್ (30), ಆರ್. ಮಣಿವಣ್ಣನ್ (32), ಹರೋನ್ ಪಾಲ್ (32), ಪಿ. ಬಾಬು, ಅಲಿಯಾಸ್ ಬೈಕ್ ಬಾಬು (33), ಕೆ. ಅರುಳಾನಂದಂ (39), ಮತ್ತು ಎಂ. ಅರುಣ್‌ಕುಮಾರ್‌ಗೆ ಶಿಕ್ಷೆ ವಿಧಿಸಲಾಗಿದೆ. ಸಂತ್ರಸ್ತ ಮಹಿಳೆಯರಿಗೆ ಒಟ್ಟಾರೆ 85 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ತೀರ್ಪಿನಲ್ಲಿ ಆದೇಶಿಸಿದೆ. ಇದನ್ನೂ ಓದಿ: ʼಆಪರೇಷನ್ ಸಿಂಧೂರ್ʼ ಟ್ರೇಡ್ ಮಾರ್ಕ್‌ಗಾಗಿ ರಿಲಯನ್ಸ್ ಸೇರಿ ಹಲವರಿಂದ ಅರ್ಜಿ
2016 ಮತ್ತು 2018ರ ಅವಧಿಯಲ್ಲಿ ಈ ಅಪರಾಧಿಗಳು ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಕೃತ್ಯಗಳನ್ನು ರೆಕಾರ್ಡ್ ಮಾಡಿಕೊಂಡು, ಬೆದರಿಸಿ ಅತ್ಯಾಚಾರ ಎಸಗಿದ್ದರು. ಅಲ್ಲದೇ ವೀಡಿಯೋ ತೋರಿಸಿ ಹಣವನ್ನು ಸುಲಿಗೆ ಮಾಡಿದ್ದರು.
2019ರ ಫೆ.24 ರಂದು 19 ವರ್ಷದ ಸಂತ್ರಸ್ತೆಯೊಬ್ಬಳು ನೀಡಿದ್ದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ, 2019ರ ಮೇ 21 ರಂದು ಕೊಯಮತ್ತೂರು ಮಹಿಳಾ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಆದಾಗ್ಯೂ, ವಿಚಾರಣೆಯ ವಿಳಂಬದಿಂದಾಗಿ ಮದ್ರಾಸ್ ಹೈಕೋರ್ಟ್ ಮಧ್ಯಪ್ರವೇಶಿಸಿಸಿತ್ತು. ಈ ಪ್ರಕರಣವನ್ನು ಕೊಯಮತ್ತೂರಿನ ಇಂಟಿಗ್ರೇಟೆಡ್ ಕೋರ್ಟ್ ಕಾಂಪ್ಲೆಕ್ಸ್‌ಗೆ ವರ್ಗಾಯಿಸಿ, ಪ್ರತ್ಯೇಕ ಕೋರ್ಟ್ ರೂಮ್ ವ್ಯವಸ್ಥೆ ಮಾಡುವಂತೆ ನಿರ್ದೇಶಿಸಿತ್ತು. ಇದೀಗ ಸುದೀರ್ಘ ವಿಚಾರಣೆ ಬಳಿಕ ಇಂದು ತೀರ್ಪು ಹೊರಬಿದ್ದಿದೆ.
ಏನಿದು ಪ್ರಕರಣ?
2019ರ ಫೆಬ್ರುವರಿಯಲ್ಲಿ ಯುವತಿಯೊಬ್ಬಳು, ನಾಲ್ವರು ಪುರುಷರ ತಂಡ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ವಿಡಿಯೊಗಳನ್ನಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಳು. ಇದೇ ವೇಳೆ ಪೊಲ್ಲಾಚಿಯಲ್ಲಿ ಅನೇಕ ಮಹಿಳೆಯರ ಮೇಲೆ ಇಂಥದ್ದೇ ಗುಂಪೊಂದು ಲೈಂಗಿಕ ದೌರ್ಜನ್ಯ ಎಸಗಿ, ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ವರದಿಯಾಗಿತ್ತು.
ಸಾರ್ವಜನಿಕ ವಲಯದಲ್ಲಿ ಈ ಸುದ್ದಿ ಹರಡುತ್ತಿದ್ದಂತೆ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತವಾಗಿತ್ತು. ವಿಧಾನಸಭೆಯಲ್ಲೂ ಈ ವಿಚಾರ ಚರ್ಚೆಯಾಗಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದ್ದರು. ಬಳಿಕ ಪ್ರಕರಣದ ತನಿಖೆ ನಡೆಸುವಂತೆ ಸಿಬಿ ಸಿಐಡಿ ಪೊಲೀಸರಿಗೆ ತಮಿಳುನಾಡು ಸರ್ಕಾರ ಆದೇಶಿಸಿತ್ತು. ನಂತರ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಗಿತ್ತು. ಇದನ್ನೂ ಓದಿ: ಮೈನಿಂಗ್ ಕೇಸಲ್ಲಿ 7 ವರ್ಷ ಜೈಲು – ಶಾಸಕ ಸ್ಥಾನದಿಂದ ಅನರ್ಹರಾಗ್ತಾರಾ ರೆಡ್ಡಿ?