ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತು ಪರಿಶೀಲಿಸದ ಮತ್ತು ಸುಳ್ಳು ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರಧಾನಿ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷಕ್ಕೂ (AAP) ಇದೇ ರೀತಿಯ ನೋಟಿಸ್ ನೀಡಲಾಗಿದೆ. ಬಿಜೆಪಿ ನೀಡಿದ ದೂರ ಆಧರಿಸಿ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ವಿಜಯೇಂದ್ರ ತಮ್ಮ ಸಾಮರ್ಥ್ಯದಿಂದ ನೇಮಕಗೊಂಡಿದ್ದಾರೆ: ಜೆ.ಪಿ.ನಡ್ಡಾ
ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ, “ಸುಳ್ಳು” ಮತ್ತು “ಪರಿಶೀಲಿಸದ” ಹೇಳಿಕೆಗಳನ್ನು ನೀಡಿದ್ದಾರೆ ಎಂದು ಬಿಜೆಪಿ ದೂರು ನೀಡಿದೆ. ಇದನ್ನು ಆಧರಿಸಿ, ಚುನಾವಣಾ ಆಯೋಗ, ಗುರುವಾರ ರಾತ್ರಿ 8 ಗಂಟೆಯೊಳಗೆ ತಮ್ಮ ಹೇಳಿಕೆಗಳಿಗೆ ವಿವರ ನೀಡುವಂತೆ ತಿಳಿಸಿದೆ.
ನರೇಂದ್ರ ಮೋದಿ ಸರ್ಕಾರವು ಸಾರ್ವಜನಿಕ ವಲಯದ ಉದ್ಯಮಗಳನ್ನು ಖಾಸಗೀಕರಣಗೊಳಿಸಿದೆ ಎಂಬ ಆಧಾರರಹಿತ ಮತ್ತು ಸುಳ್ಳು ಆರೋಪಗಳನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಮಾಡಿದ್ದಾರೆ ಎಂದು ಬಿಜೆಪಿ ತನ್ನ ದೂರಿನಲ್ಲಿ ತಿಳಿಸಿದೆ. ಇದನ್ನೂ ಓದಿ: ಮೋದಿ ಗ್ಯಾರಂಟಿಗಳ ಮುಂದೆ ಕಾಂಗ್ರೆಸ್‌ನ ಹುಸಿ ಭರವಸೆಗಳು ಕೆಲಸ ಮಾಡಲ್ಲ: ಪ್ರಧಾನಿ
ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. ಮತದಾರರು 230 ವಿಧಾನಸಭಾ ಕ್ಷೇತ್ರಗಳಿಂದ ಶಾಸಕರನ್ನು ಆಯ್ಕೆ ಮಾಡಲಿದ್ದಾರೆ.