LatestLeading NewsMain PostNational

ರಾಜಕೀಯವನ್ನು ರಾಜಕೀಯ ಮೈದಾನದಲ್ಲೇ ಮಾಡಬೇಕು, ಸರ್ಕಾರಿ ಕಚೇರಿಗಳಲ್ಲಲ್ಲ: ಡಿಕೆಶಿ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ (National Herald case) ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಅದರ ಅಂಗಸಂಸ್ಥೆ ಯಂಗ್ ಇಂಡಿಯಾದ ಆದಾಯದ ಬೆನ್ನು ಬಿದ್ದಿದ್ದಾರೆ. ಯಂಗ್ ಇಂಡಿಯಾಗೆ ದೇಣಿಗೆ ನೀಡಿದ ಕಾಂಗ್ರೆಸ್ (Congress) ನಾಯಕರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಇದರ ಭಾಗವಾಗಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಮತ್ತು ಡಿ.ಕೆ ಸುರೇಶ್ (DK Suresh) ಅವರನ್ನು ವಿಚಾರಣೆ ನಡೆಸಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಡಿ.ಕೆ ಸಹೋದರರು ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು. ಇಬ್ಬರನ್ನು ಪ್ರತ್ಯೇಕ ವಿಚಾರಣೆ ನಡೆಸಿದ ಅಧಿಕಾರಿಗಳು ಯಂಗ್ ಇಂಡಿಯಾಗೆ ನೀಡಿದ ದೇಣಿಗೆಯ ಮೂಲವನ್ನು ಪ್ರಶ್ನಿಸಿದ್ದಾರೆ. ಕಳೆದ ಎಪ್ರಿಲ್‌ನಲ್ಲಿ ಡಿ.ಕೆ ಸುರೇಶ್ 25 ಲಕ್ಷ ರೂ. ದೇಣಿಗೆ ನೀಡಿದ್ದು, ಡಿ.ಕೆ ಶಿವಕುಮಾರ್ ಆಗಾಗ ದೇಣಿಗೆ ನೀಡಿರುವುದು ತಿಳಿದುಬಂದಿದೆ.

ಯಂಗ್ ಇಂಡಿಯಾಗೆ ದೇಣಿಗೆ ನೀಡಲು ಕಾರಣ ಏನು? ಅದರ ಉದ್ದೇಶ ಏನು? ಮತ್ತು ದೇಣಿಗೆ ನೀಡಿದ ಹಣದ ಮೂಲ ಯಾವುದು? ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎಂದು ಮೂಲಗಳು ಹೇಳಿವೆ. ದೇಣಿಗೆಯ ಉದ್ದೇಶ ಮತ್ತು ಕಾರಣಗಳನ್ನು ವಿವರಿಸಿರುವ ಡಿ.ಕೆ ಸಹೋದರರು, ದೇಣಿಗೆ ನೀಡಿದ ಹಣದ ಮೂಲದ ಬಗ್ಗೆ ಮಾಹಿತಿ ನೀಡಲು ಕಾಲಾವಕಾಶ ಕೇಳಿದ್ದಾರೆ ಎಂಬುದು ತಿಳಿದು ಬಂದಿದೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ; ಶಿವಲಿಂಗದ ವೈಜ್ಞಾನಿಕ ಪರೀಕ್ಷೆಗೆ ಆಕ್ಷೇಪ – ತೀರ್ಪಿನ ದಿನಾಂಕ ಮುಂದೂಡಿದ ವಾರಣಾಸಿ ಕೋರ್ಟ್‌

4 ಗಂಟೆಗಳ ವಿಚಾರಣೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ.ಕೆ ಶಿವಕುಮಾರ್, ಏನು ಕೇಳಿದರು ಎಂದು ಎಲ್ಲವೂ ಹೇಳಲು ಸಾಧ್ಯವಿಲ್ಲ. ಕೆಲವು ದಾಖಲೆಗಳನ್ನು ಸಲ್ಲಿಸಿದ್ದೇನೆ, ಇನ್ನೂ ಕೆಲವು ದಾಖಲೆಗಳನ್ನು ನೀಡುತ್ತೇನೆ ಎಂದು ಹೇಳಿದ್ದೇನೆ. ಆನ್‌ಲೈನ್ ಮೂಲಕ ದಾಖಲೆಗಳನ್ನು ಸಲ್ಲಿಸುತ್ತೇನೆ ಎಂದರು.

ಇದೇ ವೇಳೆ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಜಕೀಯವನ್ನು ರಾಜಕೀಯ ಮೈದಾನದಲ್ಲೇ ಮಾಡಬೇಕು. ಸರ್ಕಾರಿ ಏಜೆನ್ಸಿಗಳ ಕಚೇರಿ ಮೂಲಕ ಮಾಡಬಾರದು ಎಂದು ಕಿಡಿಕಾರಿದರು. ಇದನ್ನೂ ಓದಿ: ನನಗೆ ವೋಟು ಹಾಕಬೇಡಿ – ರಸ್ತೆ ದುರಸ್ತಿ ಬಗ್ಗೆ ಮಾತನಾಡಲು ಹೋದ ಗ್ರಾಮಸ್ಥರಿಗೆ ಅಪ್ಪಚ್ಚು ರಂಜನ್ ತಿರುಗೇಟು

ಸಂಸದ ಡಿ.ಕೆ ಸುರೇಶ್ ಮಾತನಾಡಿ, ಯಂಗ್ ಇಂಡಿಯಾ ಟ್ರಸ್ಟ್‌ಗೆ ದೇಣಿಗೆ ನೀಡಿದ್ದನ್ನು ಪ್ರಶ್ನಿಸಿ ವಿಚಾರಣೆಗೆ ಕರೆದಿದ್ದರು. ಎಪ್ರಿಲ್ ತಿಂಗಳಲ್ಲಿ 25 ಲಕ್ಷ ರೂ. ದೇಣಿಗೆ ನೀಡಿದ್ದೆವು. ಈ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ತೆರಿಗೆ ನೀಡುವುದು ಬಾಕಿ ಇದ್ದರೆ ನೀಡಲು ನಾವು ಸಿದ್ದ. ಅದನ್ನು ಇಡಿ ಅಧಿಕಾರಿಗಳು ಕೇಳಿದರೆ ನೀಡಲು ನಾವು ಸಿದ್ದರಿದ್ದೇವೆ. ಕಳೆದ 10 ವರ್ಷದ ಹಣಕಾಸು ವ್ಯವಹಾರದ ಬಗ್ಗೆಯೂ ಮಾಹಿತಿ ಕೇಳಿದ್ದಾರೆ ಅದನ್ನೂ ಇ-ಮೇಲ್ ಮಾಡುತ್ತೇವೆ. ಯಾವಾಗ ಕರೆಯುತ್ತೇವೆ ಅಂದು ವಿಚಾರಣೆಗೆ ಬರಬೇಕು ಎಂದಿದ್ದಾರೆ. ಮುಂದೆ ವಿಚಾರಣೆಗೆ ಕರೆದರೆ ಬರುತ್ತೇವೆ ಎಂದು ಹೇಳಿದರು.

Live Tv

Leave a Reply

Your email address will not be published. Required fields are marked *

Back to top button