ಬೆಂಗಳೂರು: ಜನ ಸಾಮಾನ್ಯರು ರಾಜಕಾಲುವೆಯಲ್ಲಿ ಕೊಚ್ಚಿಕೊಂಡು ಹೋದರೂ ಪರವಾಗಿಲ್ಲ. ಆದರೆ ನಮ್ ಮೇಡಮ್ ಗೆ ಮಾತ್ರ ಸೊಳ್ಳೆ ಮತ್ತು ವಾಸನೆ ಬರಬಾರದು ಅಂತ ಇಡೀ ರಾಜಕಾಲುವೆಯನ್ನ ಮುಚ್ಚಲು ಹೊರಟಿದ್ದಾರೆ. ಇದು ನಗರದ ವಿವಿಐಪಿ ಕಲ್ಚರ್. ವಿವಿಐಪಿಗಳು ಏನ್ ಬೇಕಾದರೂ ಮಾಡುತ್ತಾರೆ ಅನ್ನೋದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೆ.
ಸಚಿವೆ ಜಯಮಾಲ, ಶಾಸಕ ನಾರಾಯಣಸ್ವಾಮಿ, ಮಾಜಿ ಸಚಿವೆ ಮೋಟಮ್ಮ ಮತ್ತು ಅನತಿ ದೂರದಲ್ಲಿ ದಿನೇಶ್ ಗುಂಡೂರಾವ್ ಪುಟ್ಟಸ್ವಾಮಿ ಸೇರಿದಂತೆ ಹಲವು ರಾಜಕಾರಣಿಗಳ ಮನೆಗಳು ಮತ್ತು ಶ್ರೀಮಂತರ ಮನೆಗಳು ಕಾಣ ಸಿಗುತ್ತವೆ. ಈಗಾಗಲೇ 700 ಮೀಟರ್ ಮೇಲ್ಛಾವಣಿ ನಿರ್ಮಾಣ ಮಾಡಿರುವ ಬಿಬಿಎಂಪಿ ಇಡೀ ಡಾಲರ್ಸ್ ಕಾಲೋನಿಯಲ್ಲಿ ಹಾದು ಹೋಗಿರುವ ರಾಜಕಾಲುವೆ ಮೇಲೆಲ್ಲ ಮೇಲ್ಛಾವಣಿ ಹಾಕಲು ತೀರ್ಮಾನ ಮಾಡಿದೆ ಎಂದು ತಿಳಿದುಬಂದಿದೆ.
ಮಳೆಗಾಲದಲ್ಲಿ ವಾಸನೆ ತಡೆಯೋದಕ್ಕೆ ಆಗೋದಿಲ್ಲ ಅಂತ ಸಚಿವೆ, ರಾಜಕಾರಣಿಗಳೇ ಹೆಚ್ಚಾಗಿ ವಾಸ ಮಾಡುವ ಮನೆಗಳ ಪಕ್ಕದ ರಾಜಕಾಲುವೆಯ ಮೇಲ್ಛಾವಣಿಯನ್ನ ಮುಚ್ಚಲು ಹೊರಟಿದ್ದಾರೆ. ವಾಸನೆ ಹಾಗು ಸೊಳ್ಳೆಗಳು ಬಾರದಂತೆ ಈ ಮೇಲ್ಛಾಣಿಯನ್ನು ಹಾಕಲಾಗುತ್ತಿದ್ದು, ಇದಕ್ಕಾಗಿ ಬಿಬಿಎಂಪಿ ಬರೋಬ್ಬರಿ 3 ಕೋಟಿಗೂ ಅಧಿಕ ಹಣವನ್ನ ಖರ್ಚು ಮಾಡುತ್ತಿದೆ.
ರಾಜಕಾರಣಿಗಳಿಗಾಗಿ ಈ ವಿಶೇಷ ರೀತಿಯ ಸೊಳ್ಳೆ ಮತ್ತು ವಾಸನೆ ರಹಿತ ರಾಜಕಾಲುವೆ ಸಿಂಗಾರ ಮಾಡುತ್ತಿರುವ ಬಿಬಿಎಂಪಿ ಅಧಿಕಾರಿಗಳು, ಜನಸಾಮಾನ್ಯರು ವಾಸ ಮಾಡುತ್ತಿರುವ ಕಡೆ ಇದೇ ರೀತಿ ಮಾಡುತ್ತಿದ್ದಾರಾ ಅಂತ ನೋಡಿದರೆ ಅಲ್ಲಿ ಹಳೆಯ ಪರಿಸ್ಥಿತಿಗಿಂತನೂ ಭಿನ್ನ ಪರಿಸ್ಥಿತಿ ಕಾಣುವುದಿಲ್ಲ. ರಾಜಕಾರಣಿಗಳು ಮತ್ತು ಶ್ರೀಮಂತರೇ ವಾಸ ಮಾಡುವ ಈ ಜಾಗದಲ್ಲಿ ಬಿಬಿಎಂಪಿಯ ಈ ಯೋಜನೆ ಅಗತ್ಯ ಇರಲಿಲ್ಲ. ಬಿಬಿಎಂಪಿ ಜನಸಾಮಾನ್ಯರಿಗೊಂದು ಶ್ರೀಮಂತರಿಗೊಂದು ನೀತಿ ಮಾಡುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಬಿ.ಎಸ್.ಗೌಡ ಹೇಳಿದ್ದಾರೆ.