ಒಂದು ಕಾಲದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕನಾಗಿ ವಿಶ್ವಕಪ್ ಗೆದ್ದು ದೇಶದ ಕೀರ್ತಿ ಪತಾಕೆ ಹಾರಿಸಿದ್ದ ಮಾಜಿ ಕ್ರಿಕೆಟಿಗ ಇದೀಗ ರಾಜಕೀಯ ಇನ್ನಿಂಗ್ಸ್‌ನ ಕೊನೆಯ ಹಂತದಲ್ಲಿದ್ದಾರೆ. ಹೌದು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಬಂಧನವಾಗಿದೆ. ಈ ಬೆನ್ನಲ್ಲೇ ಪಾಕಿಸ್ತಾನ ಚುನಾವಣಾ ಆಯೋಗ ಇಮ್ರಾನ್ ಖಾನ್ ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ (PTI) ಮುಖ್ಯಸ್ಥ ಸ್ಥಾನದಿಂದ ವಜಾಗೊಳಿಸಿದೆ. ಇದರಿಂದ ಖಾನ್ ಬೆಂಬಲಿಗರು ಕೆಂಡಾಮಂಡಲವಾಗಿದ್ದಾರೆ.
ಒಂದೆಡೆ ದೇಶದಲ್ಲಿ ಪ್ರತ್ಯೇಕತೆಯ ಕೂಗಿನಿಂದ ಅರಾಜಕತೆ ಉಂಟುಮಾಡುವ ಸನಿಹದಲ್ಲಿದ್ದರೆ ಮತ್ತೊಂದೆಡೆ, ರಾಜಕೀಯ ಅರಾಜಕತೆ ತಲೆದೋರಿದೆ. ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಇದು ನುಂಗಲಾರದ ತುತ್ತಾಗಿದೆ. ಪ್ರಸಕ್ತ ವರ್ಷದಲ್ಲೇ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ಸ್ಪರ್ಧಿಸದಂತೆ ಅವರನ್ನ ತಡೆಯವುದು ಎದುರಾಳಿ ಬಣದ ಹುನ್ನಾರವಾಗಿದೆ. ಆದ್ದರಿಂದಲೇ ಇಮ್ರಾನ್ ಬಂಧಿಸುವ ಅಸ್ತ್ರವನ್ನ ಆಡಳಿತ ಪಕ್ಷ ಪ್ರಯೋಗಿಸಿದೆ. ಹಾಗಿದ್ದರೆ ಪಾಕಿಸ್ತಾನದ (Pakistan) ಸುತ್ತ ನಡೆಯುತ್ತಿರುವ ಒಳ ಕದನಗಳ ಒಂದು ನೋಟ ಇಲ್ಲಿದೆ…
Advertisement
Advertisement
ಇಮ್ರಾನ್ ಖಾನ್ ಜೀವಕ್ಕೆ ಅಪಾಯವಿದೆಯಾ?
ಸದ್ಯ ಇಮ್ರಾನ್ ಖಾನ್ ಅವ್ರನ್ನ ಪೂರ್ವ ಪಂಜಾಬ್ ಪ್ರಾಂತ್ಯದ ಅಟಾಕ್ ಜೈಲಿನಲ್ಲಿ ಇರಿಸಲಾಗಿದೆ. ಜೈಲು ಶಿಕ್ಷೆಗೆ ಗುರಿಯಾದ ಉಗ್ರರನ್ನೂ ಈ ಜೈಲಿನಲ್ಲಿ ಇರಿಸಲಾಗುತ್ತದೆ. ಇಲ್ಲಿನ ಪರಿಸ್ಥಿತಿ ಭಯಾನವಾಗಿರುತ್ತದೆ. ಯಾರೊಂದಿಗೂ ಮಾತನಾಡುವುದಕ್ಕೂ ಬಿಡುವುದಿಲ್ಲ. ಕಾನೂನು ತಂಡವನ್ನೂ ಒಳಗೆ ಬಿಡುತ್ತಿಲ್ಲ ಎಂದು ಪಿಟಿಐ ವಕೀಲ ಶೋಹಿಬ್ ಷಹೀನ್ ಕಿಡಿಕಾರಿದ್ದಾರೆ. ಈ ನಡುವೆ ಇಮ್ರಾನ್ ಖಾನ್ ಜೀವಕ್ಕೆ ಅಪಾಯವಿದೆ ಎಂಬುದಾಗಿಯೂ ಪಿಟಿಐ ಪಕ್ಷದ ಶಾ ಮೊಹಮದ್ ಖುರೇಷಿ ಆರೋಪಿಸಿದ್ದಾರೆ. ಇದನ್ನೂ ಓದಿ: ವಿಶ್ವದ ಅತಿಸಣ್ಣ ದೇಶ ಯಾವ್ದು..? ಎಲ್ಲಿದೆ ಗೊತ್ತಾ..? – ಅಚ್ಚರಿಯಾದ್ರೂ ಇದು ನಿಜ!
Advertisement
Advertisement
ಇಮ್ರಾನ್ ಬಂಧನವಾಗಿದ್ದೇಕೆ?
150ಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಾಂಟೆಡ್ ಆಗಿರುವ ಇಮ್ರಾನ್ ಖಾನ್ ಪ್ರಧಾನಿ ಹುದ್ದೆಯಲ್ಲಿದ್ದಾಗ ತಮಗೆ ಬಂದ ಉಡುಗೊರೆಗಳನ್ನ ಅಕ್ರಮವಾಗಿ ಮಾರಾಟ ಮಾಡಿಕೊಂಡಿದ್ದಾರೆ ಎಂಬ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ನ್ಯಾಯಾಲಯ ಖಾನ್‌ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 5 ವರ್ಷ ಸಕ್ರಿಯ ರಾಜಕಾರಣದಿಂದಲೂ ಬ್ಯಾನ್ ಮಾಡಿದೆ. ಈ ವರ್ಷದ ಅಕ್ಟೋಬರ್ ನವೆಂಬರ್‌ನಲ್ಲೇ ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ನಾಯಕತ್ವದ ಪಾಕಿಸ್ತಾನ ತಹ್ರಿಕ್ – ಇನ್ಸಾಫ್ (ಪಿಟಿಐ) ಬಹುಮತದೊಂದಿಗೆ ಮತ್ತೆ ಅಧಿಕಾರ ಹಿಡಿಯುತ್ತದೆ ಎನ್ನಲಾಗ್ತಿದೆ. ಆದ್ರೆ ಇದಕ್ಕೆ ಆಸ್ಪದ ಕೊಡಬಾರದು ಎನ್ನುವ ನಿಟ್ಟಿನಲ್ಲಿ ಎದುರಾಳಿ ಪಾಳಯದಲ್ಲಿ ಮತ್ತೆ ಇಮ್ರಾನ್ ಖಾನ್ ರಾಜಕೀಯ ರಂಗದಲ್ಲಿ ತಲೆ ಎತ್ತದಂತೆ ನೋಡಿಕೊಳ್ಳಲು ಜೈಲುವಾಸಿಯನ್ನಾಗಿ ಮಾಡಿದೆ. ಈಗಿನ ಮಟ್ಟಿಗೆ ಅವರು ಚುನಾವಣೆ ಅಖಾಡ ಪ್ರವೇಶಿಸುವ ಅರ್ಹತೆ ಕಳೆದುಕೊಂಡಿದ್ದಾರೆ. ಪಾಕ್‌ನಲ್ಲಿ ಪ್ರಧಾನಿ ಹಾಗೂ ಅಧ್ಯಕ್ಷರಾದವವರ ಪೈಕಿ ಬಹುತೇಕರು ಸೆರೆವಾಸ ಅನುಭವಿಸಿದ್ದಾರೆ.
ಏನಿದು ತೋಶಖಾನ?
ತೋಶಖಾನ (Toshakhana) ಸರ್ಕಾರದ ಖಜಾನೆಯಾಗಿದ್ದು, ಸರ್ಕಾರಕ್ಕೆ ಬಂದ ಕಾಣಿಕೆಗಳನ್ನ ನಿರ್ವಹಣೆ ಮಾಡುತ್ತದೆ. 1974ರಲ್ಲಿ ತೋಶಖಾನ ಇಲಾಖೆಯನ್ನ ಸ್ಥಾಪಿಸಲಾಯಿತು. ಭಾರತ ಸೇರಿದಂತೆ ಅನೇಕ ದೇಶಗಳು ತೋಶಖಾನಗಳನ್ನು ಹೊಂದಿವೆ. ಅಲ್ಲಿ ಇದನ್ನು ವಿದೇಶಾಂಗ ಸಚಿವಾಲಯ ನಿರ್ವಹಿಸುತ್ತದೆ. ಉಡುಗೊರೆಗಳನ್ನು ದೇಶದ ಆಸ್ತಿ ಎಂದು ಭಾವಿಸಲಾಗುತ್ತದೆ. ಸದ್ಯ ಇಮ್ರಾನ್ ಖಾನ್ ತಮ್ಮ ಅಧಿಕಾರಾವಧಿಯಲ್ಲಿ ತಮಗೆ ಬಂದ ಉಡುಗೊರೆಗಳನ್ನು ಈ ತೋಶಖಾನ ನಿಧಿಗೆ ನೀಡಬೇಕಿತ್ತು. ಆದ್ರೆ ಖಾನ್ ಅದನ್ನು ಮಾರಾಟ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಇದೆ. ಖಾನ್ ಅವರು 2018ರ ನವೆಂಬರ್‌ನಲ್ಲಿ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಂದ ಪಡೆದ ನಾಲ್ಕು ಉಡುಗೊರೆಗಳನ್ನು ಮಾರಾಟ ಮಾಡಿದ್ದಾರೆ. ಪ್ರಾಚೀನ ಗಡಿಯಾರ, ಚಿನ್ನದ ಪೆನ್, ಉಂಗುರ, ನೆಕ್ಲೆಸ್ ಮತ್ತು ಇತರೆ ಅಮೂಲ್ಯ ಉಡುಗೊರೆಗಳನ್ನು ಮಾರಾಟ ಮಾಡಿಕೊಂಡಿದ್ದಾರೆ ಎನ್ನುವ ಆರೋಪಗಳು ಇದೆ. ಪಕ್ಷದ ಮಾಜಿ ಅಧ್ಯಕ್ಷರಾದವರ ಪೈಕಿ ಆಸಿಫ್ ಅಜಿ ಜರ್ಧಾರಿ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್, ಯೂಸೂಫ್ ರಾಜಾ ಗಿಲಾನಿ ಕೂಡ ಇಂತಹ ಅಪರಾಧ ಎಸಗಿದ್ದಾರೆ.
ತೋಶಖಾನಾ ಕೇಸ್ ಹಿನ್ನೆಲೆ ಏನು?
ಆಗಸ್ಟ್ 2022: ಪ್ರಕರಣವನ್ನ ಚುನಾವಣಾ ಆಯೋಗದ ಪರಿಶೀಲನೆಗೆ ಒಪ್ಪಿಸಿದ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ರಾಜಾ
ಅಕ್ಟೋಬರ್ 21, 2022: ಪ್ರಕರಣದ ತೀರ್ಪು ಕಾಯ್ದಿರಿಸಿದ್ದ ಆಯೋಗ
ಅಕ್ಟೋಬರ್ 21, 2022: ಇಮ್ರಾನ್‌ಖಾನ್‌ರಿಂದ ತಪ್ಪು ಹೇಳಿಕೆ, ಅಸಮರ್ಪಕ ಆಸ್ತಿ ಘೋಷಣೆ ಎಂದು ತೀರ್ಪು. ಸದಸ್ಯತ್ವ ರದ್ದು.
ನವೆಂಬರ್ 21,2022: ಕ್ರಿಮಿನಲ್ ವಿಚಾರಣೆ ಕೋರಿ ಖಾನ್ ವಿರುದ್ಧ ಸೆಷನ್ ಕೋರ್ಟ್‌ಗೆ ಆಯೋಗದಿಂದ ದೂರು.
ಜುಲೈ 4, 2023: ಅರ್ಜಿದಾರರ ವಾದ ಮರು ಆಲಿಸುವಂತೆ ಕೆಳಹಂತದ ನ್ಯಾಯಾಲಯಕ್ಕೆ ಇಸ್ಲಾಮಾಬಾದ್ ಹೈಕೋರ್ಟ್ ಆದೇಶ.
ಜುಲೈ 8, 2023: ಪ್ರಕರಣ ವಿಚಾರಣೆಗೆ ಅರ್ಹ ಎಂದು ಸೆಷನ್ಸ್ ಕೋರ್ಟ್ ನ್ಯಾಯಾಧೀಶರ ಘೋಷಣೆ.
ಆಗಸ್ಟ್ 2, 2023: ಇಮ್ರಾನ್ ಖಾನ್ ಸಲ್ಲಿಸಿದ್ದ ಸಾಕ್ಷಿಗಳ ಪಟ್ಟಿ ತಿರಸ್ಕರಿಸಿದ ಕೋರ್ಟ್.
ಆಗಸ್ಟ್ 5, 2023: ಆರೋಪ ಸಾಬೀತು. 3 ವರ್ಷ ಶಿಕ್ಷೆ ವಿಧಿಸಿ ಆದೇಶ.
ಖಾನ್ ರಾಜಕೀಯ ಭವಿಷ್ಯ ಅಂತ್ಯವೇ?
ಪಾಕಿಸ್ತಾನ ರಾಜಕೀಯ ಇತಿಹಾಸದಲ್ಲಿ ಜೈಲಿಗೆಹೋಗಿ ಬಂದ ನಂತರ ಅನೇಕರು ಜನಪ್ರಿಯತೆ ಗಳಿಸಿದ ಉದಾಹರಣೆಗಳಿವೆ. ಭ್ರಷ್ಟಾಚಾರ ಮತ್ತು ಇತರೆ ಪ್ರಕರಣಗಳಲ್ಲಿ ಮಾಜಿ ಪ್ರಧಾನಿಗಳಿಗೆ ಜೈಲು ಶಿಕ್ಷೆಗೆ ಗುರಿಯಾಗಿರುವವರಲ್ಲಿ ಇಮ್ರಾನ್ ಖಾನ್ ಮೊದಲಿಗರಲ್ಲ. ಹಾಲಿ ಪ್ರಧಾನಿಯೂ ಸೇರಿದಂತೆ ಅನೇಕರು ಜೈಲು ಪಾಲಾದ ಹಿನ್ನೆಲೆ ಇದೆ.
* 1962ರಲ್ಲಿ ಪಾಕಿಸ್ತಾನದ 5ನೇ ಪ್ರಧಾನಿ ಹುಸೇನ್ ಶಾಹಿದ್ ಸುಹ್ರವರ್ದಿ (Huseyn Shaheed Suhrawardy) ಸುಳ್ಳು ಆರೋಪ ಪ್ರಕರಣದಲ್ಲಿ ಶಿಕ್ಷೆಗೆ ಒಳಪಟ್ಟಿದ್ದರು. ಆಗಿನ ಸೇನಾ ಆಡಳಿತಗಾರ ಜನರಲ್ ಅಯೂಬ್ ಖಾನ್‌ರಿಗೆ ಬೆಂಬಲಿಸಲಿಲ್ಲ ಎಂಬುದು ನೈಜ ಕಾರಣವಾಗಿತ್ತು.
* 9ನೇ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ಅವರಿಗೆ 1974ರಲ್ಲಿ ರಾಜಕೀಯ ವಿರೋಧಿಯ ಕೊಲೆಗೆ ಸಂಚು ನಡೆಸಿದ್ದ ಪ್ರಕರಣದಲ್ಲಿ ಮರಣದಂಡನೆ ವಿಧಿಸಿದ್ದು, 1979ರ ಏಪ್ರಿಲ್ 4ರಂದು ಗಲ್ಲುಶಿಕ್ಷೆಗೆ ಒಳಪಡಿಸಲಾಗಿತ್ತು. ಇಮ್ರಾನ್ ಖಾನ್ ಪಾಕಿಸ್ತಾನದ 7ನೇ ಮಾಜಿ ಪ್ರಧಾನಿಯಾಗಿದ್ದಾರೆ.
* ಎರಡು ಬಾರಿ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೋ ಭ್ರಷ್ಟಾಚಾರ ಪ್ರಕರಣದಲ್ಲಿ ಹಲವು ಬಾರಿ ಬಂಧನಕ್ಕೆ ಒಳಗಾಗಿದ್ದರು. 1999ರ ಏಪ್ರಿಲ್‌ನಲ್ಲಿ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆಗ ಸ್ವಯಂ ಗಡೀಪಾರಿಗೆ ಒಳಗಾಗಿದ್ದರಿಂದ ಬಂಧನದಿಂದ ತಪ್ಪಿಸಿಕೊಂಡಿದ್ದರು.
* ಜನರಲ್ ಪರ್ವೇಜ್ ಮುಷರಫ್ ಅವರ ಅವಧಿಯಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು 1999ರಲ್ಲಿ ಬಂಧಿಸಿದ್ದು, ನಂತರ 10 ವರ್ಷದ ಅವಧಿಗೆ ಗಡೀಪಾರು ಮಾಡಲಾಗಿತ್ತು.
* ಹಾಲಿ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಅವರನ್ನ 2020, ಸೆ.28 ರಂದು ಬಂಧಿಸಲಾಗಿತ್ತು. ಎನ್‌ಎಬಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಲಾಹೋರ್ ಹೈಕೋರ್ಟ್ ಜಾಮೀನು ನಿರಾಕರಿಸಿದ ನಂತರ ಬಂಧನಕ್ಕೀಡಾಗಿದ್ದರು. ಸುಮಾರು 7 ತಿಂಗಳ ನಂತರ ಅವರನ್ನು ಲಾಹೋರ್‌ನ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು.
* 21ನೇ ಪ್ರಧಾನಿಯಾಗಿದ್ದ ಶಾಹೀದ್ ಖಾನ್ ಅಬ್ಬಾಸಿ ಅವರನ್ನು ಎಲ್‌ಎನ್‌ಜಿ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
* ಇಮ್ರಾನ್ ಖಾನ್ ಅವರನ್ನು ಈ ಹಿಂದೆ ಭ್ರಷ್ಟಾಚಾರ ಪ್ರಕರಣದಲ್ಲಿ 2023ರ ಮೇ 9ರಂದು ಬಂಧಿಸಲಾಗಿತ್ತು. ಕೋರ್ಟ್ ಮಧ್ಯಸ್ಥಿಕೆ ನಂತರ ಬಿಡುಗಡೆ ಮಾಡಲಾಗಿತ್ತು. ಈಗ ತೋಶಖಾನ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ತೋಶಖಾನ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಖಾನ್ ಇನ್ನು ಮುಂದೆ ಪಿಟಿಐ ಮುಖ್ಯಸ್ಥ ಹುದ್ದೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಖ್ಯಾತ ವಕೀಲ ಜುಲ್ಫಿಕರ್ ಅಹ್ಮದ್ ಭುಟ್ಟೋ ಹೇಳಿದ್ದಾರೆ. ಇದನ್ನೂ ಓದಿ: ಕ್ರೀಡೆಗೆ ಸೌದಿ ಕೋಟಿ ಕೋಟಿ ಹೂಡಿಕೆ ಮಾಡುತ್ತಿರುವುದು ಯಾಕೆ?
ಕ್ರೀಡಾ ಕಣದಲ್ಲಿ ಖಾನ್ ಲೈಫ್ ಹೇಗಿತ್ತು?:
ಇದೀಗ ಆಡಳಿತ ಪಕ್ಷದ ನಾಯಕರ ಪಾಲಿಗೆ ರಾಜಕೀಯ ವಿಲನ್ ಆಗಿರುವ ಇಮ್ರಾನ್ ಒಂದು ಕಾಲದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಮುನ್ನಡೆಸಿ ಪ್ರಶಸ್ತಿಗಳನ್ನು ತಂದುಕೊಟ್ಟ ದಂತಕತೆಯಾಗಿದ್ದಾರೆ. 88 ಟೆಸ್ಟ್, 175 ಏಕದಿನ ಪಂದ್ಯ, 382 ಪ್ರಥಮದರ್ಜೆ ಕ್ರಿಕೆಟ್ ಹಾಗೂ ಲಿಸ್ಟ್-ಎ ನಲ್ಲಿ 425 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್‌ನಲ್ಲಿ 3,807 ರನ್, ಏಕದಿನ ಕ್ರಿಕೆಟ್‌ನಲ್ಲಿ 3,709 ರನ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 17,771 ರನ್ ಹಾಗೂ ಲಿಸ್ಟ್ ಎ ನಲ್ಲಿ 10,100 ರನ್ ಕಲೆಹಾಕಿದ್ದಾರೆ. ಅಷ್ಟೇ ಅಲ್ಲದೇ ಸ್ಟಾರ್ ಆಲ್‌ರೌಂಡರ್ ಆಗಿದ್ದ ಖಾನ್ ಟೆಸ್ಟ್ ಕ್ರಿಕೆಟ್‌ನಲ್ಲಿ 362 ವಿಕೆಟ್, ಏಕದಿನ ಕ್ರಿಕೆಟ್‌ನಲ್ಲಿ 182 ವಿಕೆಟ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1,287 ವಿಕೆಟ್ ಹಾಗೂ ಲಿಸ್ಟ್ ಎ ನಲ್ಲಿ 507 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ್ದಾರೆ.
Web Stories