ಚಿಕ್ಕಬಳ್ಳಾಪುರ: ವಿವಿಧ ಭಾಷೆ, ಧರ್ಮ, ಜಾತಿ, ಮತ, ಪಂಥ ಗಳನ್ನು ಮೀರಿದ ಏಕತೆಯ ರೂಪವಾಗಿ ಭವ್ಯ ಭಾರತವನ್ನು ಕಾಣಬಹುದು. ಆದರೆ ಇತ್ತೀಚೆಗೆ ಜಾತಿ-ಜಾತಿ, ಧರ್ಮಗಳ ನಡುವೆಯೇ ರಾಜಕೀಯ ವ್ಯಕ್ತಿಗಳು ಕಿಚ್ಚು ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂತಹ ಘಟನೆಗೆ ಸ್ಪಷ್ಟ ಸಾಕ್ಷಿ ಎಂಬಂತೆ ಇಲ್ಲೊಂದು ಗ್ರಾಮದ ಜನರಿಗೆ ಜಾತಿ-ಧರ್ಮಗಳಿಗಿಂತ ರಾಜಕೀಯ ಪಕ್ಷವೇ ಶ್ರೇಷ್ಠವಾಗಿದೆ. ತಮ್ಮ ಒಣ ಪ್ರತಿಷ್ಠೆಗಾಗಿ ಗ್ರಾಮದ ದೇವರಿಗೆ ಪ್ರತ್ಯೇಕ ಪೂಜೆ ಪುನಸ್ಕಾರದಲ್ಲಿ ತೊಡಗಿದ್ದಾರೆ.
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹುಜಗೂರು ಗ್ರಾಮದಲ್ಲಿ ಇಂತಹ ಬೆಳವಣಿಗೆ ಸಾಕ್ಷಿಯಾಗಿದ್ದು, ಈ ಗ್ರಾಮದಲ್ಲಿ ವಾಸಿಸುವ 130 ಕುಟುಂಬ ಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ರಾಜಕೀಯ ಸಂಘರ್ಷಕ್ಕೆ ಹೆಸರು ಪಡೆದಿದೆ. ಗ್ರಾಮದ 130 ಕುಟುಂಬಗಳ ಪೈಕಿ 74 ಕುಟುಂಬಗಳು ಜೆಡಿಎಸ್ ಪಕ್ಷ ಬೆಂಬಲಿಸಿದರೆ, ಉಳಿದ 56 ಕುಟುಂಬಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತವೆ. ಈ ಗ್ರಾಮದಲ್ಲಿ ಜೆಡಿಎಸ್ ಬೆಂಬಲಿತರ ಮನೆಗಳು ಇರುವ ಬೀದಿಗೆ ಕಾಂಗ್ರೆಸ್ ನವರು ಹೆಜ್ಜೆ ಇಡಲ್ಲ. ಕಾಂಗ್ರೆಸ್ ಬೆಂಬಲಿತರ ಮನೆಯ ಇರುವ ಕಡೆಗೆ ಜೆಡಿಎಸ್ ನವರು ಹೆಜ್ಜೆ ಹಾಕಲ್ಲ. ಅಷ್ಟೇ ಅಲ್ಲದೇ ಪರಸ್ಪರರು ಮಾತಾಡೋದು ಅಷ್ಟಕ್ಕಷ್ಟೇ.
Advertisement
Advertisement
ಗ್ರಾಮದ ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದರೂ ಅವರ ಪಕ್ಷದವರು ಇವರ ಮನೆಯ ಬಳಿ ಹೋಗಲ್ಲ. ಕೊನೆಗೆ ಶುಭ ಸಮಾರಂಭಗಳಿಗೂ ಹೋಗಲ್ಲ. ಚುನಾವಣೆ ಬರಲಿ – ಮುಗಿಯಲಿ, ವರ್ಷ ಪೂರ್ತಿಯೂ ಹಾವು ಮುಂಗುಸಿಯಂತೆ ಇರುತ್ತಾರೆ ಈ ಗ್ರಾಮದ ಕುಟುಂಬಗಳು.
Advertisement
ಇವರ ಪಕ್ಷ ರಾಜಕೀಯ ಕಾದಾಟ ಕೇವಲ ಬರೀ ಮಾತಿನಲ್ಲಿ ನಿಲ್ಲದೇ ಹಬ್ಬ ಹರಿದಿನಗಳ ದೇವರ ಕಾರ್ಯದಲ್ಲೂ ನಡೆಯುತ್ತದೆ. ಯಾವುದೇ ಹಬ್ಬ, ರಾಷ್ಟ್ರೀಯ ಆಚರಣೆಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನವನ್ನು ಪ್ರತ್ಯೇಕವಾಗಿ ಆಚರಿಸುತ್ತಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಗ್ರಾಮದಲ್ಲಿ ನಡೆಯುವ ಗಣೇಶ ಹಬ್ಬದಂದು ಬೇರೆ ಬೇರೆಯಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಾರೆ. ಇತ್ತೀಚೆಗೆ ನಡೆದ ಸಂಕ್ರಾಂತಿ ಹಬ್ಬದಂದು ಪ್ರತ್ಯೇಕ ದೇವರ ಗುಡಿಗಳನ್ನು ನಿರ್ಮಿಸಿ ರಾಸುಗಳಿಗೆ ಕಿಚ್ಚು ಹಾಯಿಸಿ ಪೂಜೆ ನೇರವೇರಿಸಿದ್ದಾರೆ.
Advertisement
ಈ ಗ್ರಾಮದಲ್ಲಿರುವ ಆಂಜನೇಯಸ್ವಾಮಿಗೆ ಶನಿವಾರ ಜೆಡಿಎಸ್ ಬೆಂಬಲಿತರು ಪೂಜೆ ಸಲ್ಲಿಸಿದರೆ, ಕಾಂಗ್ರೆಸ್ ಬೆಂಬಲಿತರು ಸೋಮವಾರ ಪೂಜೆ ಸಲ್ಲಿಸುತ್ತಾರೆ. ವಿಶೇಷ ಏನೆಂದರೆ ಕಾಂಗ್ರೆಸ್ ನವರು ಪ್ರತಿಷ್ಠಾಪಿಸಿರುವ ನವಗ್ರಹ ಕಲ್ಲುಗಳಿಗೆ ಜೆಡಿಎಸ್ ನವರು ನಮಸ್ಕಾರ ಹಾಕುವುದು ವಿರಳಾತಿ ವಿರಳ. ಅಲ್ಲದೇ ಆಟೋಗಳ ಮೂಲಕ ಪಟ್ಟಣಕ್ಕೆ ತೆರಳುವಾಗಲೂ ಸಹ ನಾವು ಕಾಂಗ್ರೆಸ್ ನೀವು ಜೆಡಿಎಸ್ ಎನ್ನುವ ಬೇಧ ಭಾವ ಕಾಣಸಿಗುತ್ತದೆ. ಇಂತಹ ಭೇದ ಭಾವಗಳು ಸದ್ಯ ಶಾಲೆಗೆ ಹೋಗುವ ಸಣ್ಣ ಮಕ್ಕಳಿಗೂ ತಟ್ಟಿದ್ದು ಅವರು ಕೂಡ ನಾವು ಜೆಡಿಎಸ್, ನಾವು ಕಾಂಗ್ರೆಸ್ ಪಕ್ಷ ಎನ್ನುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.
ಮನೆಯೊಂದು ಮೂರು ಬಾಗಿಲು ಎಂಬಂತೆ ಗ್ರಾಮವೊಂದು ಎರಡು ಮನಸ್ಥಿತಿಗಳು ಎಂಬಂತಾಗಿ ಕಾಂಗ್ರೆಸ್, ಜೆಡಿಎಸ್ ಎಂದು ವಿಭಜನೆಯಾಗಿದೆ. ಆದರೆ ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಗ್ರಾಮದ ಮುಂದಿನ ಮಕ್ಕಳ ಭವಿಷ್ಯ ಸ್ಥಿತಿ ಏನಾಗಬಹುದು ಎಂಬುದು ಹಲವರ ಚಿಂತೆ. ಆದರೆ ರಾಜಕೀಯ ಪಕ್ಷಗಳಿಗೆ ಮಾತ್ರ ಈ ಗ್ರಾಮದಲ್ಲಿ ಚುನಾವಣೆಗಾಗಿ ಹಣ ಖರ್ಚು ಮಾಡುವುದು ಬೇಡ, ಚುನಾವಣಾ ಪ್ರಚಾರ ಮಾಡುವುದು ಬೇಡ. ಗ್ರಾಮಸ್ಥರ ಮತಗಳು ತಮ್ಮ ಪಕ್ಷಕ್ಕೆ ಬಂದೇ ಬರುತ್ತವೆ ಎನ್ನುವ ಲೆಕ್ಕಾಚಾರ ರಾಜಕೀಯ ಪಕ್ಷಗಳ ನಾಯಕರದ್ದು. ಆದರೆ ರಾಜಕೀಯ ಬೇಗುದಿಯ ವಿಷ ಬೀಜ ಬೆಳೆಯುತ್ತಿರುವ ಮಕ್ಕಳಲ್ಲಿ ಮೂಡಿರುವುದು ವಿಪರ್ಯಾಸದ ಸಂಗತಿಯಾಗಿದೆ.