ರಶ್ಮಿಕಾಗೂ ರಾಜಕೀಯ ನಾಯಕರಿಗೂ ಇದೆಯೇ ಹಣಕಾಸಿನ ನಂಟು?

Public TV
3 Min Read
Rashmika Mandanna 5 e1566298336205

– 2.5 ಕೋಟಿ ರೂ. ಮೌಲ್ಯದ ಜಾಗ ಖರೀದಿ
– ರಶ್ಮಿಕಾ ಹೆಸರಿನಲ್ಲಿ ಬೇನಾಮಿಯಾಗಿ ಹಣ ಹೂಡಿಕೆ?

ಬೆಂಗಳೂರು/ಮಡಿಕೇರಿ: ನಟಿ ರಶ್ಮಿಕಾ ಮಂದಣ್ಣ ಅವರಿಗೂ ರಾಜಕೀಯ ವ್ಯಕ್ತಿಗಳಿಗೂ ಹಣಕಾಸಿನ ನಂಟು ಇದೆಯೇ ಹೀಗೊಂದು ಅನುಮಾನ ಈಗ ಎದ್ದಿದೆ.

ಈ ಹಿಂದೆ ರಾಜ್ಯದ ಪ್ರಭಾವಿ ರಾಜಕೀಯ ನಾಯಕರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಈ ದಾಳಿಯ ತನಿಖೆಯ ವೇಳೆ ಈ ವ್ಯಕ್ತಿಗಳು ರಶ್ಮಿಕಾ ಮಂದಣ್ಣ ಅವರ ಹೆಸರಿನಲ್ಲಿ ಬೇನಾಮಿಯಾಗಿ ಹಣವನ್ನು ಹೂಡಿಕೆ ಮಾಡಿದ್ದ ಬಗ್ಗೆ ಕೆಲ ವಿಚಾರಗಳು ಲಭ್ಯವಾದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನುವ ಅನುಮಾನ ಈಗ ವ್ಯಕ್ತವಾಗಿದೆ.

491236

ಇಂದು ಬೆಳಗ್ಗೆ 7 ಗಂಟೆಯ ವೇಳೆಗೆ ಮೂರು ಕಾರುಗಳಲ್ಲಿ ವಿರಾಜಪೇಟೆಯಲ್ಲಿರುವ ನಿವಾಸದ ಮೇಲೆ 10 ಐಟಿ ಅಧಿಕಾರಿಗಳು ಆಗಮಿಸಿ ರಶ್ಮಿಕಾ ಮತ್ತು ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿರುವ ಆಸ್ತಿ ಮತ್ತು ಆದಾಯಕ್ಕೆ ಸಂಬಂಧಿಸಿದಂತೆ ಲೆಕ್ಕ ಪತ್ರವನ್ನು ಪರಿಶೀಲನೆ ನಡೆಸುತ್ತಿದ್ದಾರೆ. 2016ರ ಡಿಸೆಂಬರ್ 30 ರಂದು ಬಿಡುಗಡೆಯಾದ ‘ಕಿರಿಕ್ ಪಾರ್ಟಿ’ ಸಿನಿಮಾದ ಬಳಿಕ ಮನೆ ಮಾತಾಗಿರುವ ರಶ್ಮಿಕಾ ಮಂದಣ್ಣ ಆದಾಯ ಕೆಲ ವರ್ಷಗಳಿಂದ ಗಣನೀಯವಾಗಿ ಹೆಚ್ಚಳವಾಗಿದೆ. ಇದನ್ನೂ ಓದಿ: ನನ್ನ ಅಕೌಂಟ್‍ನಲ್ಲಿ ದುಡ್ಡೇ ಇಲ್ಲ ಎಂದಿದ್ದ 5 ದಿನದಲ್ಲೇ ರಶ್ಮಿಕಾಗೆ ಐಟಿ ಶಾಕ್

ತಂದೆ ಕಾಫಿ ಉದ್ಯಮಿ:
ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ಹೆಸರಿನಲ್ಲಿ ವಿರಾಜಪೇಟೆಯಲ್ಲಿ ಸೆರಿನಿಟಿ ಹಾಲ್ ಮತ್ತು ವಾಣಿಜ್ಯ ಸಂಕೀರ್ಣವಿದೆ. ವಿರಾಜಪೇಟೆ ಸುತ್ತಮುತ್ತ 50 ಎಕರೆ ಕಾಫಿ ತೋಟವನ್ನು ಮದನ್ ಮಂದಣ್ಣ ಹೊಂದಿದ್ದಾರೆ. ಅಷ್ಟೇ ಅಲ್ಲದೇ ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮದಲ್ಲಿ ಸುಮಾರು 2.5 ಕೋಟಿ ರೂ. ಮೌಲ್ಯದ ಐದೂವರೆ ಎಕರೆ ಜಾಗ ಖರೀದಿ ಮಾಡಿದ್ದಾರೆ. ತಂದೆಯ ಹೆಸರಿನಲ್ಲಿ ರಶ್ಮಿಕಾ ಜಾಗ ಖರೀದಿ ಮಾಡಿದ್ದು ಇನ್ನು ಪತ್ರ ವ್ಯವಹಾರ ಮುಗಿದಿಲ್ಲ ಎನ್ನುವ ವಿಚಾರ ಈಗ ಲಭ್ಯವಾಗಿದೆ.

MDK

ರಶ್ಮಿಕಾ ಕುಟುಂಬ ಇತ್ತೀಚೆಗೆ ವಿರಾಜಪೇಟೆ ಗೋಣಿಕೊಪ್ಪದಲ್ಲಿ 3 ಎಕರೆ ಜಾಗ ಖರೀದಿಸಿ ರೆಸಿಡೆನ್ಶಿಯಲ್ ಸ್ಕೂಲ್ ಪ್ರಾರಂಭ ಮಾಡುವ ಉದ್ದೇಶ ಹೊಂದಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ವಿರಾಜಪೇಟೆ ಸುತ್ತಮುತ್ತ ಸುಮಾರು 50 ಎಕರೆಯಷ್ಟು ಕಾಫಿ ತೋಟ ಖರೀದಿಯ ಬಗ್ಗೆಯೂ ಐಟಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಹಲವು ವ್ಯವಹಾರಗಳಲ್ಲಿ ಹೂಡಿಕೆಯನ್ನು ಮಾಡಿದ್ದಾರೆ.

ಮೂರು ತಿಂಗಳ ಹಿಂದೆ ರಶ್ಮಿಕಾ ಕೋಟ್ಯಂತರ ರೂ. ಬೆಲೆ ಬಾಳುವ ಕಾರು ಖರೀದಿ ಮಾಡಿದ್ದಾರೆ. ಜೊತೆಗೆ ಭೂಮಿ ಖರೀದಿ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಷ್ಟೇ ಅಲ್ಲದೇ ರಶ್ಮಿಕಾ ನಗದು ರೂಪದಲ್ಲಿ ಸಂಭಾವನೆ ಪಡೆದಿರುವ ಕಾರಣ ತೆರಿಗೆ ಪಾವತಿಸಿಲ್ಲ ಎನ್ನಲಾಗುತ್ತಿದೆ. ಈ ಎಲ್ಲಾ ಮಾಹಿತಿಯ ಆಧಾರದ ಮೇರೆಗೆ ಐಟಿ ಅಧಿಕಾರಿಗಳು ರಶ್ಮಿಕಾ ಮನೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

RASHMIKA MANDANNA copy

ಮದನ್ ಮಂದಣ್ಣ ಕಾಫಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು ರಶ್ಮಿಕಾ ಅವರ ಎಲ್ಲ ಆಸ್ತಿಯೂ ತಂದೆ ಮದನ್ ಮಂದಣ್ಣ ಹೆಸರಲ್ಲಿದೆ ಎಂದು ಹೇಳಲಾಗುತ್ತಿದೆ. ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಬಹುಬೇಡಿಕೆ ನಟಿಯಾಗಿರುವ ರಶ್ಮಿಕಾ ಈಗ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯಾಗಿದ್ದು ಹಲವು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಸಿನಿಮಾಗಳಿಗೆ ಸಹಿ ಹಾಕಿರುವ ದಾಖಲೆ ಪತ್ರಗಳನ್ನು ಐಟಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಕಾಂಗ್ರೆಸ್ ನಾಯಕ:
ರಶ್ಮಿಕಾ ತಂದೆ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಮಾಜಿ ಸಚಿವರಾದ ಡಿಕೆ ಶಿವಕುಮಾರ್ ಮತ್ತು ಕೆಜೆ ಜಾರ್ಜ್ ಅವರ ಜೊತೆ ಅವರು ಉತ್ತಮ ಸಂಬಂಧ ಹೊಂದಿದ್ದ ಮದನ್ ಮಂದಣ್ಣ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಿ ವಿರಾಜಪೇಟೆಯ ಪಟ್ಟಣ ಪಂಚಾಯತ್ ಸದಸ್ಯರಾಗಿ ಆಯ್ಕೆ ಆಗಿದ್ದರು.

ಶೂಟಿಂಗ್ ನಲ್ಲಿರುವ ರಶ್ಮಿಕಾ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈಗ ಕೇಳಿ ಬಂದಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಬಳಿಕ ದಾಳಿ ಕುರಿತ ಸತ್ಯಾಸತ್ಯತೆ ಹೊರಬರಲಿದೆ.

Share This Article
Leave a Comment

Leave a Reply

Your email address will not be published. Required fields are marked *