ರಾಮನಗರ: ನವೆಂಬರ್ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಗಳು ಆಗಲಿವೆ, ಕಾಯ್ದು ನೋಡಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ.
ಚುನಾವಣಾ ಫಲಿತಾಂಶದ ಬಳಿಕ ಇದೇ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಕೃತಜ್ಞತಾ ಸಭೆಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಬಹುಮತದ ಸರ್ಕಾರ ಬಂದಿದೆ ಎಂದು ಭಾವಿಸಬೇಡಿ. ಲೋಕಸಭಾ ಚುನಾವಣೆ ಬಳಿಕ ಏನು ಬೆಳವಣಿಗೆ ಆಗುತ್ತದೆ ಎಂದು ನೋಡೋಣ. ಈಗಿನ ರಾಜಕೀಯ ಬೆಳವಣಿಗೆ ಬಗ್ಗೆ ಯಾವುದೇ ಅಂಜಿಕೆ ಬೇಡ ಎಂದರು.
Advertisement
Advertisement
ಬಿಜೆಪಿಯವರು (BJP) ಲೂಟಿ ಮಾಡಿದ ರೀತಿಯಲ್ಲೆ ಕಾಂಗ್ರೆಸ್ನವರು (Congress) ಲೂಟಿಗೆ ಇಳಿಯಲಿದ್ದಾರೆ. ಅದರಲ್ಲೇನೂ ಹೊಸತಿಲ್ಲ. ಯಾರನ್ನು ಎಲ್ಲಿ ಹಿಡಿಯಬೇಕೆಂದು ನನಗೆ ಚೆನ್ನಾಗಿ ತಿಳಿದಿದೆ. ನಾನು ಹೋರಾಟ ಮಾಡಲು ಸಿದ್ಧನಿದ್ದೇನೆ. ಯಾವುದೇ ಕಾರಣಕ್ಕೂ ಈ ಸರ್ಕಾರದ ಮಂತ್ರಿಗಳ ಬಳಿ ಕೈ ಚಾಚುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿ ಸೇರಿದಂತೆ ಯಾವುದೇ ಯೋಜನೆಯನ್ನು ಜಾರಿಗೆ ತರುವುದು ಸುಲಭವಲ್ಲ. ಈ ಹಿಂದೆ ಜಾರಿಯಲ್ಲಿರುವ ಕಾರ್ಯಕ್ರಮಗಳೇ ಮುಂದುವರಿಯುವ ಅನುಮಾನವಿದೆ. ಅವರ ಯೋಜನೆಗಳಿಗೆ 60 ರಿಂದ 70 ಸಾವಿರ ಕೋಟಿ ರೂ. ಬೇಕು. ಅವರು ಎಲ್ಲಿಂದ ಅನುದಾನ ತರುತ್ತಾರೆ? ಇನ್ನೂ ರಸ್ತೆ, ನೀರಾವರಿ ಸೇರಿದಂತೆ ಹಲವು ಕಾರ್ಯಕ್ರಮಗಳ ವೇಗ ಯಾವ ರೀತಿ ಹಣ ಹೊಂದಿಸುತ್ತಾರೆ? ಇವರ ಅಭಿವೃದ್ಧಿ ಹೇಗೆ ಇರಲಿದೆ ಕಾದು ನೋಡಿ. ದೊಡ್ಡ ಅಭಿವೃದ್ಧಿ ಕಾರ್ಯಗಳು ಈ ಸರ್ಕಾರದಲ್ಲಿ ನಡೆಯುತ್ತದೆ ಎಂದು ಯಾವುದೇ ಕಾರಣಕ್ಕೂ ನಿರೀಕ್ಷೆ ಇಟ್ಟುಕೊಳ್ಳಬೇಡಿ ಎಂದರು. ಇದನ್ನೂ ಓದಿ: ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಒಂದಾಗಿರಲಿವೆ: ಸಿದ್ದರಾಮಯ್ಯ
ಜೆಡಿಎಸ್ (JDS) ಈ ಬಾರಿ 60 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬೇಕಿತ್ತು. ಆದರೆ ಕೆಲವರ ಪಿತೂರಿ ಮತ್ತು ಸುಳ್ಳು ಆರೋಪಗಳಿಂದ 2-3 ಸಮಾಜದ ಮತಗಳು ನಮ್ಮ ಪಕ್ಷಕ್ಕೆ ಬರಲಿಲ್ಲ. ಜೆಡಿಎಸ್ ಬಿಜೆಪಿ ಜೊತೆ ಹೋಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಬಿಜೆಪಿ ರಾಷ್ಟ್ರೀಯ ನಾಯಕರು ಏನೇನು ಮಾಡಿದ್ದಾರೆ ಗೊತ್ತು. ನಮ್ಮನ್ನು ಮುಗಿಸಲು ಹೋಗಿ ಇದೀಗ ಅವರೇ ಮುಗಿದಿದ್ದಾರೆ. ನಮ್ಮ ಕುಟುಂಬ ಇದಕ್ಕಿಂತ ಹೆಚ್ಚಿನ ಆಘಾತವನ್ನು ಎದುರಿಸಿ ನಂತರ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ. ದೇವರ ಹಾಗೂ ಜನರ ಅನುಗ್ರಹ ನಮ್ಮ ಪಕ್ಷದ ಮೇಲಿದೆ. ಸೋಲಲಿ, ಗೆಲ್ಲಲಿ ಸಂಘಟನೆ ಮುಂದುವರಿಸಲಿದ್ದೇವೆ. ಮುಂದೆ ನಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ ಹಣದ ಹೊಳೆ ಹರಿಸಿದ ಪರಿಣಾಮ ಜೆಡಿಎಸ್ ಸೋತಿದೆ: ಹೆಚ್ಡಿಕೆ