– ಘೋರ ಘಟನೆಗೆ ಜಾರ್ಖಂಡ್ ಸಿಎಂ ತನಿಖೆಗೆ ಆದೇಶ
ರಾಂಚಿ: 4 ದಿನಗಳ ನವಜಾತ ಶಿಶುವನ್ನು (Newborn Baby) ಪೊಲೀಸ್ ಅಧಿಕಾರಿಯೊಬ್ಬ (Police) ತುಳಿದು ಕೊಂದಿರುವ ಕ್ರೂರ ಘಟನೆ ಜಾರ್ಖಂಡ್‌ನ (Jharkhand) ಗಿರಿದಿಹ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಘಟನೆಗೆ ಆಘಾತ ವ್ಯಕ್ತಪಡಿಸಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ತನಿಖೆಗೆ ಆದೇಶ ನೀಡಿದ್ದಾರೆ.
ಜಿಲ್ಲೆಯ ಕೊಸೊಗೊಂಡೋಡಿಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಲಗಿದ್ದ ಶಿಶುವಿನ ಮೇಲೆ ಪೊಲೀಸ್ ಅಧಿಕಾರಿ ಕಾಲನ್ನು ಇಟ್ಟು ಕೊಂದಿದ್ದಾನೆ ಎನ್ನಲಾಗಿದೆ. ಮಗುವಿನ ಅಜ್ಜ ಬೇರೊಂದು ಪ್ರಕರಣದಲ್ಲಿ ಆರೋಪಿಯಾಗಿದ್ದು, ಈ ಹಿನ್ನೆಲೆ ಆತನನ್ನು ಬಂಧಿಸಲು ಪೊಲೀಸರ ತಂಡ ಅವರ ಮನೆಗೆ ತೆರಳಿದ್ದಾಗ ಮಗುವಿನ ಮೇಲೆ ಕಾಲಿಟ್ಟು ಸಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ಥಳೀಯರ ಪ್ರಕಾರ ದಿಯೋರಿ ಪೊಲೀಸ್ ಠಾಣೆಯ ಉಸ್ತುವಾರಿ ಸಂಗಮ್ ಪಾಠಕ್ ನೇತೃತ್ವದ ತಂಡ ಮಗುವಿನ ಅಜ್ಜ ಭೂಷಣ್ ಪಾಂಡೆ ವಿರುದ್ಧ ಪ್ರಕರಣವೊಂದರಲ್ಲಿ ಜಾಮೀನು ರಹಿತ ವಾರಂಟ್ ಹೊರಡಿಸಿದ್ದರು. ಬಳಿಕ ಅವರ ಮನೆಗೆ ಅಧಿಕಾರಿಗಳ ತಂಡ ತೆರಳಿದ್ದು, ಪೊಲೀಸರನ್ನು ನೋಡಿದ ಭೂಷಣ್ ಕುಟುಂಬ ಶಿಶುವನ್ನು ಮನೆಯಲ್ಲೇ ಬಿಟ್ಟು ಓಡಿಹೋಗಿದ್ದಾರೆ. ಇದನ್ನೂ ಓದಿ: ಬೆಡ್‌ರೂಂನಲ್ಲಿ ಮಲಗಿದ್ದ 6 ಅಡಿ ಬುಸ್ ಬುಸ್ ಹಾವು – ಎದ್ನೋ ಬಿದ್ನೋ ಅಂತಾ ಓಡಿದ ಮಹಿಳೆ!
ಪೊಲೀಸರು ಮನೆಯ ಮೂಲೆ ಮೂಲೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಅವರು ಹುಡುಕಾಟ ನಡೆಸುತ್ತಿದ್ದ ವೇಳೆ ಮಗು ಒಂದೇ ಮನೆಯಲ್ಲಿ ಮಲಗಿತ್ತು. ನಾವು ವಾಪಸ್ ಮನೆಗೆ ಬಂದು ನೋಡಿದಾಗ ಮಗು ಶವವಾಗಿ ಹೋಗಿತ್ತು ಎಂದು ಮಗುವಿನ ತಾಯಿ ತಿಳಿಸಿದ್ದಾರೆ.
ಮೃತ ಶಿಶುವಿನ ತಾಯಿ, ಅಜ್ಜ ಭೂಷಣ್ ಪಾಂಡೆ ಸೇರಿದಂತೆ ಮನೆಯ ಇತರ ಸದಸ್ಯರು ಮಗುವನ್ನು ಪೊಲೀಸರೇ ತುಳಿದು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಉಪ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ರಾಣಾ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಆರೋಗ್ಯ ಸಚಿವ ಬನ್ನಾ ಗುಪ್ತಾ, ಇಂತಹ ಘೋರ ಘಟನೆಗಳನ್ನು ಟೀಕಿಸಲಾಗುತ್ತದೆ ಮತ್ತು ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ದೇಶವು ಸಂವಿಧಾನದ ಪ್ರಕಾರ ನಡೆಯುತ್ತದೆ. ಆದ್ದರಿಂದ ಪೊಲೀಸ್ ಅಧಿಕಾರಿಗಳ ತಪ್ಪು ಕಂಡುಬಂದಲ್ಲಿ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿದೆ – CBIನಿಂದ 3ನೇ ಚಾರ್ಜ್‌ಶೀಟ್ ಸಲ್ಲಿಕೆ