ದಾವಣಗೆರೆ: ಬಂದೂಕು ಕ್ಲೀನ್ ಮಾಡುವಾಗ ಮಿಸ್ ಫೈರಿಂಗ್ ಆಗಿ ಪೊಲೀಸ್ ಪೇದೆಯ ಕುತ್ತಿಗೆ ಸೀಳಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಮೃತ ಡಿಎಆರ್ ಪೊಲೀಸ್ ಪೇದೆಯನ್ನು ಚೇತನ್.ಆರ್(28) ಎಂದು ಗುರುತಿಸಲಾಗಿದೆ. ಈ ಘಟನೆ ದಾವಣಗೆರೆ ಡಿಎಆರ್ ಶಸ್ತ್ರಾಸ್ತ್ರಗಾರದಲ್ಲಿ ಸೋಮವಾರ ಬೆಳಗ್ಗೆ ನಡೆದಿದ್ದು, ತಕ್ಷಣ ಖಾಸಗಿ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
Advertisement
Advertisement
2012 ಬ್ಯಾಚ್ ನಲ್ಲಿ ಆಯ್ಕೆಯಾಗಿದ್ದ ಚೇತನ್, ಹುಣಸಘಟ್ಟೆ ಫೈರಿಂಗ್ ಸೆಂಟರ್ ನಿಂದ ಬಂದಂತಹ ಬಂದೂಕು, ರೈಫಲ್ ಗಳನ್ನು ಸೋಮವಾರ ಬೆಳಗ್ಗೆ ಕ್ಲೀನ್ ಮಾಡುತ್ತಿದ್ದರು, ಇದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ಸ್ನೇಹಿತರನ್ನು ಚೇತನ್ ಮಾತನಾಡಿಸಿಕೊಂಡು ನಿಂತಿದ್ದರು. ಈ ವೇಳೆ ಬಂದೂಕು ಕ್ಲೀನ್ ಮಾಡುತ್ತಿರುವಾಗ ಮಿಸ್ ಫೈರಿಂಗ್ ಆಗಿದ್ದು, ಎದುರಿಗೆ ಇದ್ದ ಚೇತನ್ ಗಂಟಲು ಭಾಗದಿಂದ ತಲೆಗೆ ಬುಲೆಟ್ ಬಿದ್ದಿದೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸುವುದರೊಳಗೆ ಪ್ರಾಣಪಕ್ಷಿ ಹಾರಿ ಹೋಗಿದೆ. ಇದನ್ನೂ ಓದಿ:ಆ. 31ರೊಳಗೆ ನಿಮ್ಮ ಸೇನೆ ಇಲ್ಲಿಂದ ಕಾಲ್ಕಿತ್ತಬೇಕು- ಅಮೆರಿಕಾಗೆ ತಾಲಿಬಾನಿಗಳ ಬೆದರಿಕೆ
Advertisement
ಸದ್ಯ ಮೃತ ಪೊಲೀಸ್ ಪೇದೆಯನ್ನು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದ್ದು, ಚೇತನ್ ಕಳೆದ ಐದು ವರ್ಷಗಳ ಹಿಂದೆ ಪ್ರೀತಿಸಿ ಮನೆಯವರ ವಿರೋಧದ ನಡುವೆಯೇ ಮದುವೆಯಾಗಿದ್ದರು. ಅವರಿಗೆ ಎರಡು ವರ್ಷದ ಮಗು ಇದ್ದು, ಇದೀಗ ಚೇತನ್ ಹೆಂಡತಿ ಮತ್ತೆ 9 ತಿಂಗಳ ಗರ್ಭಿಣಿಯಾಗಿದ್ದಾರೆ. ಹೆಣ್ಣು ಮಗು ಆಗಬೇಕು ಎಂದು ಪುಟ್ಟ ಮಗುವಿಗಾಗಿ ಕಾತುರದಿಂದ ಕಾಯುತ್ತಿದ್ದರು. ಆದರೆ ಇಂದು ನಡೆದ ಆ ದುರ್ಘಟನೆಯಿಂದ ಆತನ ಕನಸಿನ ಗೋಪುರವೇ ಕಳಚಿ ಬಿದ್ದಿದೆ. ಅಲ್ಲದೇ ಶಸ್ತ್ರಾಸ್ತ್ರ ಮೀಸಲು ಪಡೆಯಲ್ಲಿ ಚೇತನ್ ಎಲ್ಲಾ ಸಿಬ್ಬಂದಿಗೂ ಅಚ್ಚುಮೆಚ್ಚಾಗಿದ್ದರು. ಆಸ್ಪತ್ರೆಗೆ ಪೂರ್ವ ವಲಯ ಐಜಿಸಿ ರವಿ.ಎಸ್ ಹಾಗೂ ಎಸ್.ಪಿ. ರಿಷ್ಯಂತ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು. ಇದನ್ನೂ ಓದಿ:ರಾಜ್ಯದಲ್ಲಿ ಇಂದಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ – ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಚಾಲನೆ
Advertisement